ನರಕ ದರ್ಶನ :ಫುಟ್ ಬೋರ್ಡ್ ಪಯಣ, ಆಪಾಯಕ್ಕೆ ಆಹ್ವಾನ
ದಿನೇ ದಿನೇ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಸ್ತಿ ಆಗ್ತಿದೆ. ಇದಕ್ಕೆ ಹೆಚ್ಚುತ್ತಿರುವ ವಾಹನಗಳು ಮುಖ್ಯ ಕಾರಣ. ಖಾಸಗಿ ವಾಹನಗಳ ಸಂಖ್ಯೆ ಜಾಸ್ತಿ ಆದ್ರೂನೂ ಬೆಂಗಳೂರು ಮಹಾನಗರ ಸಾರಿಗೆಯ (ಬಿ.ಎಂ.ಟಿ.ಸಿ) ಬಸ್ಸುಗಳಲ್ಲಿಪ್ರಯಾಣಿಸುವವರ ಸಂಖ್ಯೆಯಂತೂ ಕಡಿಮೆ ಆಗಿಲ್ಲ.
ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ವಾರ್ಷಿಕ ಹಾಗೂ ಉದ್ಯೋಗಿಗಳಿಗೆ ಮಾಸಿಕ ಪಾಸ್‌ಗಳನ್ನು ಬಿ.ಎಂ.ಟಿ.ಸಿ ವಿತರಿಸಿದೆ. ಇದರಿಂದ ಉದ್ಯೋಗಿಗಳು ಕೆಲಸಕ್ಕೆ ಹೋಗುವಾಗ ಮತ್ತು ವಿದ್ಯಾರ್ಥಿಗಳು ಶಾಲೆ ಮತ್ತು ಕಾಲೇಜುಗಳಿಗೆ ಹೋಗುವಾಗ ಹೆಚ್ಚಿಗೆ ಬಿ.ಎಂ.ಟಿ.ಸಿ. ಬಸ್ಸುಗಳಲ್ಲೇ ಪ್ರಯಾಣ ಮಾಡುತ್ತಾರೆ. ಇದರೊಂದಿಗೆ ೨೫ ರೂಪಾಯಿಯ ದಿನದ ಪಾಸ್‌ಗಳಿಂದಲಂತೂ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುತ್ತಿದೆ.
ಇದರಿಂದ ಶುರುವಾಗಿರೋ ಒಂದು ತೊಂದರೆ ಎಂದರೆ 'ಫುಟ್‌ಬೋರ್ಡ್ ಪ್ರಯಾಣ'. ಕೆಲವು ಬಸ್ಸುಗಳಲ್ಲಂತೂ ಬಹುತೇಕ ಜನರು ಫುಟ್‌ಬೋರ್ಡ್ ಮೇಲೆಯೇ ಪ್ರಯಾಣ ಮಾಡುತ್ತಾರೆ. ಈ ೨೫ ರೂ. ಪಾಸ್ ಪಡೆದವರಂತೂ ಒಂದು ಬಸ್‌ನಿಂದ ಇನ್ನೊಂದು ಬಸ್, ಇನ್ನೊಂದು ಬಸ್ಸಿನಿಂದ ಮತ್ತೊಂದು ಬಸ್‌ಗೆ ಹಾರುತ್ತಲೇ ಇರ್ತಾರೆ! ಇವರಂತೂ ಹೆಚ್ಚಿನ ಸಮಯ ಇರೋದು ಫುಟ್‌ಬೋರ್ಡ್ ಮೇಲೆ. ಇಂಥವರನ್ನು ನಿರ್ವಾಹಕರು ಮೇಲೆ
ಹತ್ತಿ ಅಂದ್ರೆ next stopನಲ್ಲಿ ಇಳೀತಿವಿ ಸರ್' ಅಂತ ಹೇಳಿ ಫುಟ್‌ಬೋರ್ಡ್ ಮೇಲೇನೇ ನಿಂತಿರುತ್ತಾರೆ.
ಇನ್ನು ಕಾಲೇಜು ಹುಡುಗರ ವಿಷಯಕ್ಕೆ ಬಂದರೆ ಅವರೆಲ್ಲ ಪ್ರಯಾಣ ಮಾಡೋದು ಫುಟ್‌ಬೋರ್ಡ್ ಮೇಲೇನೇ! ಇವರಿಗೆಲ್ಲ ಇದೊಂದು ಟ್ರೆಂಡ್ ಆಗಿ ಬಿಟ್ಟಿದೆ. ನಿರ್ವಾಹಕರು ಹೇಳಿದರೂ ಕೇಳೋಲ್ಲ, ಯಾರು ಹೇಳಿದರೂ ಕೇಳೋಲ್ಲ. ಹೀಗೆ ಫುಟ್‌ಬೋರ್ಡ್ ಪ್ರಯಾಣ ಮಾಡೋರಿಗೆ ಸಂಚಾರಿ ಆರಕ್ಷಕರು 100 ರೂಗಳ ದಂಡವನ್ನು ವಿಧಿಸುತ್ತಾರೆ. ಆದರೂ ನಮ್ ಜನ ಫುಟ್‌ಬೋರ್ಡ್ ಮೇಲೆ ನಿಂತು ಹೋಗೋದನ್ನು ತಪ್ಪಿಸೋಲ್ಲ. ಎಷ್ಟೋ ಬಾರಿ ನಿರ್ವಾಹಕರಿಗೂ ಒಳ ಹೋಗೋಕೆ ಜಾಗ ಇಲ್ಲದೇ ಅವರೂ ಸಹ ಫುಟ್‌ಬೋರ್ಡ್ ಮೇಲೇನೇ ನಿಂತು ಟಿಕೇಟುಗಳನ್ನು ಕೊಡುತ್ತಿರುತ್ತಾರೆ. ಪ್ರಯಾಣಿಕರ ಸುರಕ್ಷತೆಗಾಗಿ ಬಿ.ಎಂ.ಟಿ.ಸಿ ಬಸ್ಸುಗಳಿಗೆ ಚಾಲಕ ನಿಯಂತ್ರಿತ ಬಾಗಿಲುಗಳನ್ನು ಅಳವಡಿಸಲಾಯಿತು.
ಆದರೆ ಎಷ್ಟೋ ಚಾಲಕರು ಈ ಬಾಗಿಲುಗಳನ್ನು ಹಾಕೋದಿಲ್ಲ. ಎಷ್ಟೋ ಬಾಗಿಲುಗಳು ಕೆಲಸವನ್ನೇ ಮಾಡುವುದಿಲ್ಲ! ಅಂತಹ ಸಮಯದಲ್ಲಿ ಪ್ರಯಾಣಿಕರು ಒಳಗೆ ಜಾಗವಿದ್ದರೂ ಫುಟ್‌ಬೋರ್ಡ್ ಮೇಲೇನೇ ನಿಂತು ಪ್ರಯಾಣಿಸುತ್ತಾರೆ. ಹೀಗೆ ಪ್ರಯಾಣ ಮಾಡೋದರಿಂದ ಜೇಬುಗಳ್ಳರಿಗೆ ಸುಗ್ಗಿಯೋ ಸುಗ್ಗಿ! ತಿಂಗಳ ಕೊನೆ ಹಾಗೂ ಮೊದಲ ವಾರಗಳಲ್ಲಿ ಜೇಬುಗಳ್ಳರು ಬೇರೆಯರ ಜೇಬಿಗೆ ಕತ್ರಿ ಹಾಕಿ ತಮ್ಮ ಜೇಬನ್ನು ತುಂಬಿಸಿಕೊಳ್ತಾರೆ. ಇನ್ನು ಕೆಲವು ಪ್ರಯಾಣಿಕರು ಟಿಕೇಟ್ ಪಡೆಯದೇ ಪ್ರಯಾಣ ಮಾಡುತ್ತಾರೆ. ಅಂಥವರು ನಿರ್ವಾಹಕರು ಯಾವ ಕಡೆ ಇರ್ತಾರೆ ಅಂತ ನೋಡಿ, ಅವರಿಲ್ಲದ ಕಡೆಯಿಂದ ಹತ್ತಿ ಪ್ರಯಾಣ ಮಾಡುತ್ತಾರೆ.
'ದಯವಿಟ್ಟು ಫುಟ್‌ಬೋರ್ಡಿನ ಮೇಲೆ ಪ್ರಯಾಣಿಸಬೇಡಿ. ಇದರಿಂದ ನಿಮ್ಮ ಅಮೂಲ್ಯ ಜೀವನ ಅಪಘಾತಕ್ಕೀಡಾಗಬಹುದು. ಅದಲ್ಲದೆ ಹತ್ತುವ ಮತ್ತು ಇಳಿಯುವ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಫುಟ್‌ಬೋರ್ಡ್ ಪ್ರಯಾಣ ಆದೀತು ನಿಮ್ಮ ಕೊನೆ ಪ್ರಯಾಣ ಇಂತಹ ಫಲಕಗಳನ್ನು ಸಹ ಬಸ್ಸುಗಳ ಒಳಗೆ ಹಾಕಿರ್ತಾರೆ. ಆದರೆ ಇದನ್ನ ನೋಡೋಕೂ ಸಹ ಒಳಗೆ ಬರೊಲ್ಲ. ಹೀಗೆ ಫುಟ್‌ಬೋರ್ಡ್ ಮೇಲೆ ಪ್ರಯಾಣಿಸುವವರು ಎಷ್ಟೋ ಜನ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಅಪಘಾತವಾದಾಗ ಕೆಲವರು ಹಿಂದೂ ಮುಂದು ನೋಡದೇ ಬಸ್ಸುಗಳ ಗಾಜನ್ನು ಒಡೆದು ಬಸ್ಸುಗಳಿಗೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುತ್ತಾರೆ. ಕೆಲವು ಮಾರ್ಗಗಳಲ್ಲಿ ಸಮಯಕ್ಕೆ ಸರಿಯಾಗಿ ಬಸ್ಸುಗಳು ಇರೋದಿಲ್ಲ ಹಾಗೂ ಕಡಿಮೆ ಬಸ್ಸುಗಳಿರುತ್ತವೆ. ಅಂತಹ ಕಡೆಗಳಲ್ಲಿ ಪ್ರಯಾಣಿಕರಿಗೆ ಒಳಗೆ ಹೋಗೋಕೆ ಜಾಗವಿಲ್ಲದೇ ಫುಟ್‌ಬೋರ್ಡ್ ಪ್ರಯಾಣ ಅನಿವಾರ್ಯವಾಗಿಬಿಡುತ್ತದೆ. ಇಂತಹ ಕೆಲವು ಮಾರ್ಗಗಳಲ್ಲಿ ಬೆಳಗಿನ ಹಾಗೂ ಸಂಜೆಯ ಸಮಯದಲ್ಲಿ ಇನ್ನೂ ಹೆಚ್ಚಿನ ಬಸ್ಸುಗಳನ್ನು ಒದಗಿಸಿದರೆ ಪ್ರಯಾಣಿಕರಿಗೆ ಉಪಯೋಗವಾಗುತ್ತದೆ ಹಾಗು ಫುಟ್‌ಬೋರ್ಡ್ ಪ್ರಯಾಣವೂ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ.
ಬರಹ: ವೀರೇಶ ಹೊಗೆಸೊಪ್ಪಿನವರ್
ಚಿತ್ರಗಳು: ಆನಂದ ಅಂದಲಗಿ