Friday, March 21, 2008

ನರಕ ದರ್ಶನ : ಟ್ರಾಫಿಕ್! ಟ್ರಾಫಿಕ್! ಟ್ರಾಫಿಕ್!


ಬಾರೋ ನಮ್ ಆಫೀಸ್‌ಗೆ,
ಎಲ್ಲೋ ನಿಮ್ಮ ಆಫೀಸು?
ಕೋರಮಂಗಲ ಕಣೋ,
ಅಯ್ಯೋ ಕೋರಮಂಗಲನಾ?

ಹೊಗೋ, ನಾನಿರೋದು ಮಲ್ಲೇಶ್ವರಂ. ಇಲ್ಲಿಂದ ಅಲ್ಲಿಗೆ ಬರೋಕೆ ಏನಿಲ್ಲ ಅಂದ್ರು ಒಂದರಿಂದ ಒಂದೂವರೆ ಗಂಟೆಗಳು ಬೇಕು! ನಾನು ಬರೋಲ್ಲ ಹೋಗೋ. ಇಂತಹ ಸಂಭಾಷಣೆ ಬೆಂಗಳೂರಿನಲ್ಲಿ ಸಾಮಾನ್ಯ. ಎಲ್ಲಿ ನೋಡಿದರೂ ಟ್ರಾಫಿಕ್! ಟ್ರಾಫಿಕ್! ಟ್ರಾಫಿಕ್! flyover ಮೇಲಿಂದ ರಸ್ತೆಯ ತುದಿಯವರೆಗೂ ವಾಹನಗಳು ನಿಂತಿರುತ್ತವೆ. ಯಾಕೆ ಹೀಗೆ ನಿಂತಿರುತ್ತೆ ಅಂತ ನೋಡಿದರೆ ಎಷ್ಟೋಂದು ಕಾರಣಗಳು ಸಿಗುತ್ತವೆ. ಅಂತಹವುಗಳಲ್ಲಿ ಕೆಲವುಗಳು ಇಲ್ಲಿವೆ ನೋಡಿ.

ಕೆಲವು ಕಡೆ ಸಿಗ್ನಲ್‌ಗಳ ಬಳಿಯೇ ಎಷ್ಟೋ ಪ್ರಯಾಣಿಕರು ಬಸ್ಸುಗಳಿಗಾಗಿ ಕಾಯ್ತಾ ಇರುತ್ತಾರೆ. ಅಂತಹ ಸಮಯದಲ್ಲಿ ಬಸ್ ಹತ್ತೋಕೆ ಜನ ಹೋದ್ರೆ. ಆ ಬಸ್ಸಿನ ಹಿಂದೆ ಎಷ್ಟೋ ಗಾಡಿಗಳು ನಿಂತಿರುತ್ತೆ. ಕೆಲವು ಕಡೆಗಳಲ್ಲಂತೂ ೩೦ ಸೆಕೆಂಡಿಗೆ ಸಿಗ್ನಲ್‌ಗಳಿರುತ್ತವೆ. ಬಸ್ಸುಗಳೇ ೩೦ ಸೆಕೆಂಡು ಸಮಯವನ್ನು ಮತ್ತೆ ನುಂಗಿ ಬಿಡುತ್ತವೆ. ಹಿಂದಿರುವ ವಾಹನಗಳಿಗೆ ಮತ್ತೆ ಹಸಿರು ನಿಶಾನೆಗೆ ಕಾಯುವ ಶಿಕ್ಷೆ. ಅಂತಹ ಸ್ಥಳಗಳಲ್ಲಿ ಸಾಲಾಗಿ ವಾಹನಗಳು ನಿಂತಿರದೇ ಬೇರೇ ವಿಧಿಯೇ ಇಲ್ಲ. ಇನ್ನು ಕೆಲವರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಅತಿ ಹೆಚ್ಚು ಭಾರವಾದ ಹಾಗು ಅಗಲವಾದ ವಸ್ತುಗಳನ್ನು ಇಟ್ಟುಕೊಂಡು ಹೋಗ್ತಿರುತ್ತಾರೆ. ಅಂತಹ ಸಮಯದಲ್ಲಿ ಹಿಂದಿರುವ ವಾಹನಗಳಿಗೂ ಮುಂದೆ ಜಾಗ ಇರೋಲ್ಲ. ಮತ್ತೆ ಅವರಿಗೂ ಹೋಗೋಕೂ ಆಗೊಲ್ಲ. ಇಂತಹ ಸಮಯದಲ್ಲಿ ಸಾಲುಸಾಲಾಗಿ ವಾಹನಗಳು ನಿಂತಿರುತ್ತವೆ. ಹಲವರು ರಸ್ತೆ ಬಿಟ್ಟು ಫುಟ್ ಪಾತ್ ಮೇಲೆ ವಾಹನವನ್ನು ರಭಸವಾಗಿ ಚಲಿಸುತ್ತಾರೆ. ಇದರಿಂದ ಪಾದಚಾರಿಗಳಿಗೂ ತೊಂದರೆ, ವಾಹನ ಚಾಲಕರಿಗೂ ಕೂಡ.

ಇತ್ತೀಚೆಗಂತೂ ದ್ವಿಚಕ್ರ ವಾಹನ ಸವಾರರಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಮೊಬೈಲ್‌ನಲ್ಲಿ ಮಾತನಾಡುವುದಕ್ಕಿಂತ ಎಂ.ಪಿ.೩, ಎಫ್.ಎಂ. ಹೀಗೆ ಮನರಂಜನೆಗೆ ಮೊಬೈಲನ್ನು ಬಳಸುವವರೇ ಹೆಚ್ಚು. ಆಗ ಸವಾರರ ಗಮನ ಹೆಚ್ಚಾಗಿ ಸಂಗೀತದ ಕಡೆ ಇರುತ್ತದೆ ಮತ್ತು ಮುಂದಿರುವ ವಾಹನವನ್ನು ಹಿಮ್ಮೆಟ್ಟಿಸುವ ಹಟದಿಂದ ವೇಗವಾಗಿ ಹೋಗಲು ಪ್ರಯತ್ನಿಸುತ್ತಾರೆ. ಅಂತಹ ಸಮಯದಲ್ಲಿ ದೊಡ್ಡ ವಾಹನಗಳಿಗೆ ಹೋಗೋಕೆ ಜಾಗ ಇಲ್ಲದೇ ಟ್ರಾಫಿಕ್ ಜಾಮ್ ಆಗೋ ಸಾಧ್ಯತೆಗಳಿರುತ್ತದೆ. ಇತ್ತೀಚೆಗೆ ದ್ವಿಚಕ್ರ ವಾಹನಗಳು ಹಾಗೂ ಕಾರು ಮುಂತಾದ ವಾಹನಗಳ ದಟ್ಟಣೆ ಜಾಸ್ತಿ ಆಗ್ತಿದೆ. ಪಕ್ಕದ ಬೀದಿಗೆ ಹೋಗಬೇಕು ಅಂದ್ರೂ ದ್ವಿಚಕ್ರ ವಾಹನ ತಗೊಂಡು ಹೊಗ್ತಾರೆ. ಇನ್ನು ಎಷ್ಟೋ ಜನ ಪಾರ್ಕ್‌ಗಳಿಗೆ ವ್ಯಾಯಾಮಕ್ಕೆಂದು ಹೋಗುವಾಗ ತಮ್ಮ ವಾಹನವನ್ನು ತಗೊಂಡು ಹೋಗ್ತಾರೆ. ಇಂತಹ ಕಡೆ ಹೋಗುವಾಗಲಾದ್ರೂ ನಡೆದುಕೊಂಡು ಹೋದ್ರೆ ಸ್ವಲ್ಪ ಪ್ರಮಾಣದಲ್ಲಾದ್ರು ಟ್ರಾಫಿಕ್ ನ ತಡೆಗಟ್ಟಬಹುದು.

ಹೀಗೆ ಎಷ್ಟೋ ಕಾರಣಗಳಿಂದ ನಗರದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿರುತ್ತೆ. ಇದಕ್ಕೆಲ್ಲ ಕಾರಣ ನಾವೇ. ನಾವು ಎಚ್ಚೆತ್ತುಕೊಂಡು ಸಂಚಾರಿ ನಿಯಮಗಳನ್ನು ಪಾಲಿಸುತ್ತಾ ಹೋದರೆ ಸ್ವಲ್ಪ ಮಟ್ಟಿಗಾದರೂ ಟ್ರಾಪಿಕ್ಕನ್ನು ಕಡಿಮೆ ಮಾಡಬಹುದು. ನೀವೇನಂತೀರಾ?

ಚಿತ್ರ ಹಾಗೂ ಬರಹ: ವೀರೇಶ್ ಹೊಗೆಸೊಪ್ಪಿನವರ್

Read more...

Monday, March 17, 2008

ನಾನು ಇ-ಜ್ಞಾನಿ ಆಗಿಬಿಟ್ಟೆ

ಸ್ನೇಹಿತ ಟಿ.ಜಿ. ಶ್ರೀನಿಧಿ ನಮ್ಮ ಬ್ಲಾಗ್ ನ ಲೇಖನ ವೊಂದನ್ನು ತಮ್ಮ ಇ-ಜ್ಞಾನ -ವಿಜ್ಞಾನ ವಿಷಯಗಳಿಗೆ ಮೀಸಲಾಗಿರುವ ಕನ್ನಡ ಬ್ಲಾಗ್ ನಲ್ಲಿ ಹಾಕಿದ್ದಾರೆ. ಈ ಮೂಲಕ ಇ -ಜ್ಞಾನಿ ಮಾಡಿಬಿಟ್ಟಿದ್ದಾರೆ. ಧನ್ಯವಾದಗಳು.

Read more...

Saturday, March 15, 2008

ನರಕದರ್ಶನ : ಬಣ್ಣ ಬಣ್ಣದ ವಿನೈಲ್‌ಗಳೆಂಬ ಕಪ್ಪು ಚುಕ್ಕೆಗಳುಚಿತ್ರ ಹಾಗೂ ಬರಹ: ವೀರೇಶ್ ಹೊಗೆಸೊಪ್ಪಿನವರ್

'ನಮ್ಮ ಊರು ಬೆಂಗಳೂರು, ಹೊಯ್.... ಆನಂದದ ತವರೂರು. . . .' ಆದರೆ ಎಲ್ಲಿದೆ ಬೆಂಗಳೂರಿನಲ್ಲಿ ಆನಂದ? ಟ್ರಾಫಿಕ್ಕು, ಕಳ್ಳತನ, ಸುಲಿಗೆ, ದರೋಡೆ! ಎಲ್ಲಿ ನೋಡಿದರೂ ಕಾಂಕ್ರೀಟ್ ಕಾಡು... ಅಷ್ಟೇ ಅಲ್ಲದೇ ಹಗಲು ದರೋಡೆಗಳು ಬೇರೆ.

ಆ ಹಾಡಿನಲ್ಲಿ ವರ್ಣಿಸಿರೊ ಹಾಗೆ ಗಿಡಗಳು, ಮರಗಳು ಯಥೇಚ್ಛವಾಗಿದ್ವು. ಆದರೆ ವಾಹನ ದಟ್ಟಣೆ ಹೆಚ್ಚಾಗುತ್ತಾ ಹೋದಂತೆ ರಸ್ತೆಗಳನ್ನೆಲ್ಲ ಅಗಲ ಮಾಡುತ್ತಾ ಹೋದ್ರು. ಆಗ ವಿಧಿಯೇ ಇಲ್ಲದೇ ಮರಗಳನ್ನು ಕಡೀತಾ ಹೋಗ್ಬೇಕಾಯ್ತು. ಹೀಗೇ ದಿನೇ ದಿನೇ ಮರಗಳನ್ನು ಕಡೀತಾ ಹೋದ್ರು. ನಗರದ ಅಂದನು ಕೆಡ್ತು ಪರಿಸರನೂ ಹಾಳಾಗಿ ಹೋಯ್ತು. ಈ ರೀತಿ ಮರಗಳು ಕಡಿಮೆ ಆಗಿ ಪರಿಸರ ಹಾಳಾಗ್ತಾ ಇದ್ರೆ. ಇನ್ನೊಂದು ಕಡೆ ಈಗಿನ ಹೊಸ ಟ್ರೆಂಡ್ ಆಗಿರೋ ವಿನೈಲ್ ಬ್ಯಾನರ್‌ಗಳು ಬೆಂಗಳೂರನ್ನ ಆಕ್ರಮಿಸಿಕೊಳ್ತಾ ಇವೆ. ಇವು ಕೂಡಾ ಪರಿಸರ ನಾಶ ಮಾಡೊದ್ರಲ್ಲಿ ತಮ್ಮದೊಂದು ಕೊಡುಗೆಯನ್ನೇ ನೀಡುತ್ತಾ ಬಂದಿವೆ.


ನಮ್ಮ ಹೆಚ್ಚಿನ ರಾಜಕಾರಣಿಗಳು ವಿನೈಲ್ ಬ್ಯಾನರ್‌ಗಳನ್ನು ಯುಗಾದಿ, ಸಂಕ್ರಾಂತಿ, ಹೊಸ ವರ್ಷ, ಬಕ್ರಿದ್ ಹೀಗೆ ಎಲ್ಲಾ ಹಬ್ಬಗಳ ಪ್ರಯುಕ್ತ ತಮ್ಮ ಕ್ಷೇತ್ರದ ಜನತೆಗೆ ಶುಭಾಶಯಗಳನ್ನು ತಿಳಿಸಲು ಬಳಸ್ತಾ ಇದಾರೆ.ಇದು ಒಂಥರಾ ಆದ್ರೆ ಇದೇ ರಾಜಕಾರಣಿಗಳ ಹೆಸರನ್ನೇ ಬಳಸಿಕೊಂಡು ಪ್ರಚಾರ ಬಯಸುವ ಈ ರಿಯಲ್ ಎಸ್ಟೇಟ್ ಏಜಂಟರುಗಳು, ಕೆಲವೊಂದು ವಿಚಾರಗಳಲ್ಲಿ ರೌಡಿಗಳಾಗಿ ಮಿಂಚಿ ಮುಂದೆ ನಮಗೊಂದು ಸೀಟ್ ಕೊಡಿ ಅಂತ ಮಂತ್ರಿಗಳನ್ನು ಕೇಳೋಕೋಸ್ಕರ ರಾಜಕಾರಣಿಗಳ ಹೆಸರುಗಳು ಮತ್ತು ಅವರ ಚಿತ್ರಗಳನ್ನು ಬಿಂಬಿಸುವ ಬ್ಯಾನರ್‌ಗಳನ್ನು ಚಿತ್ರಿಸಿ ಕೆಳಗಡೆ ತಮ್ಮದೊಂದು ಸಣ್ಣ ಚಿತ್ರ ಹಾಕ್ಕೊಂಡು ತಮ್ಮದೇ ಆದ ಏರಿಯಾಗಳಲ್ಲಿ ರಾರಾಜಿಸುವಂತೆ ಹೋರ್ಡಿಂಗ್‌ಗಳನ್ನು ಹಾಕಿಸ್ತಾರೆ.


ಮೊದಲಾದ್ರು ಬಟ್ಟೆಯ ಬ್ಯಾನರ್‌ಗಳು ಬರ್ತಿದ್ವು, ಅವುಗಳು ಸ್ವಲ್ಪ ದಿನ ಮಳೆಲಿ ನೆಂದು ಬಿಸಿಲಲ್ಲಿ ಒಣಗಿದರೆ ಹರಿದು ಹೋಗ್ತಾ ಇದ್ವು... ಹಾಗಾಗಿ ಪರಿಸರಕ್ಕೆ ಅಷ್ಟೊಂದು ಹಾನಿಕಾರಕವಾಗಿ ಅನ್ನಿಸ್ತಾ ಇರ್ಲಿಲ್ಲ. ಆದ್ರೆ ಈಗ ಬಂದಿರೋ ವಿನೈಲ್ ಬ್ಯಾನರ್‌ಗಳಂತೂ ಬೇಗ ಹರಿಯೋಲ್ಲ. ಹರಿದರೂ ಅವು ಕೊಳೆತು ಹೋಗೋಲ್ಲ. ಅದ್ರಿಂದಾನೆ ಪರಿಸರಕ್ಕೆ ಹೆಚ್ಚು ಹಾನಿಯಾಗ್ತಿದೆ.


ಇದಿಷ್ಟು ಬ್ಯಾನರ್‌ಗಳ ಕತೆ ಆದ್ರೆ. ಬಂಟಿಂಗ್ಸ್‌ಗಳದ್ದು ಅದೇ ಕತೆ. ಚುನಾವಣಾ ಪ್ರಚಾರಕ್ಕಾಗಿ ನಾನಾ ಪಕ್ಷಗಳನ್ನು ಬಿಂಬಿಸುವ ಬಂಟಿಂಗ್ಸ್‌ಗಳು ಕಂಬದಿಂದ ಕಂಬಕ್ಕೆ, ಕಟ್ಟಡಗಳಿಂದ ಕಟ್ಟಡಗಳಿಗೆ ವ್ಯಾಪಿಸಿ ನಗರವೇ ಪ್ಲಾಸ್ಟಿಕ್‌ಮಯವಾಗಿ ಬಿಟ್ಟಿದೆ.


ನೀವು ಯೋಚಿಸಬಹುದು ಇಷ್ಟೆಲ್ಲ ಆದ್ರು ನಗರ ಪಾಲಿಕೆಯವರು ಯಾವುದೇ ಕ್ರಮ ತೆಗೆದುಕೊಳ್ಳೊಲ್ವ ಅಂತ. ಈಗ ನಗರಪಾಲಿಕೆಯ ಯಾವುದೇ ಸ್ಥಳದಲ್ಲಿ ಬ್ಯಾನರ್‌ಗಳನ್ನು ಅಥವ ಬಂಟಿಂಗ್ಸ್‌ಗಳನ್ನು ಹಾಕ್ಬೇಕಾದ್ರೆ ಜಂಟಿ ಆಯುಕ್ತರಿಗೊಂದು ಅರ್ಜಿ ಬರೆದು ಸದರಿ ಅರ್ಜಿಯಲ್ಲಿ ಎಷ್ಟು ಬ್ಯಾನರ್, ಯಾವ ಯಾವ ಸ್ಥಳಗಳಲ್ಲಿ ಬ್ಯಾನರ್‌ಗಳನ್ನು ಹಾಕಬೇಕು? ಇಂತಹ ವಿವರಗಳನ್ನು ನೀಡಿ ಪರವಾನಗಿಯನ್ನು ಪಡೆದು ನಂತರ ಅವರು ಸೂಚಿಸಿದ ಸ್ಥಳಗಳಲ್ಲಿ ಮಾತ್ರ ಹಾಕತಕ್ಕದ್ದು. ಅಷ್ಟೇ ಅಲ್ಲದೇ ಬಟ್ಟೆಯ ಬ್ಯಾನರ್‌ಗೆ ಪ್ರತಿ ಮೀಟರ್‌ಗೆ 20 ರೂ.ಗಳಂತೆ ಹಾಗೂ ಪ್ಲಾಸ್ಟಿಕ್ ಬ್ಯಾನರ್‌ಗಳಿಗೆ 60 ರೂಪಾಯಿಯಂತೆ ಹಣ ಸಂದಾಯ ಮಾಡಿ, ಪ್ರತಿ ಬ್ಯಾನರ್‌ಗಳ ಮೇಲೂ ನಗರಪಾಲಿಕೆಯ ಮುದ್ರೆ ಒತ್ತಿಸಿ ನಂತರ ಪಾಲಿಕೆಯವರು ಸೂಚಿಸಿದ ಸ್ಥಳದಲ್ಲಿ ಬ್ಯಾನರ್‌ಗಳನ್ನು ಕಟ್ಟಬೇಕಾಗುತ್ತದೆ. ಆದ್ರೆ ಎಷ್ಟು ಜನ ಈ ನಿಯಮಗಳನ್ನು ಪಾಲಿಸ್ತಾ ಇದಾರೋ ತಿಳಿಯುತ್ತಿಲ್ಲ. ಅಕ್ರಮವಾಗಿ ಕಟ್ಟಿದ ಬ್ಯಾನರ್‌ಗಳನ್ನು ನಗರ ಪಾಲಿಕೆಯವರು ಕಿತ್ತಾಕುತ್ತಾರೆ.


ಪ್ರಭಾವಶಾಲಿ ಜನರು ಹಾಗು ರಾಜಕಾರಣಿಗಳೇನೋ ಪಾಲಿಕೆಗೆ ಮೋಸ ಮಾಡಿ ಬ್ಯಾನರ್‌ಗಳನ್ನು ಹಾಕ್ತಾರೆ. ಆದ್ರೆ. ಸಣ್ಣ ಪುಟ್ಟ ಸಂಘಸಂಸ್ಥೆಗಳು ಬ್ಯಾನರ್‌ಗಳನ್ನು ಹಾಕಲಾಗದೇ ಗೋಡೆ ಬರಹಗಳ ಮೇಲೆಯೇ ಪ್ರಚಾರ ಮಾಡುತ್ತವೆ. ಕೆಲ ಬರಹಗಳಂತೂ ಎಷ್ಟು ಅರ್ಥ ಪೂರ್ಣವಾಗಿರುತ್ತವೆಂದರೆ ಅಲ್ಲಿ ಬರೆದಿರುವ ಸಾಲುಗಳು ಸಮಾಜದ ಕಣ್ಣು ತೆರೆಸುತ್ತವೆ. ಸ್ಯಾಂಪಲ್ ಓದಿ: 'ಬಾಬಾ ದತ್ತ ಬೇರೆ ಬೇರೆಯಲ್ಲ, ಹಿಂದೂ ಮುಸ್ಲಿಂ ಶತ್ರುಗಳಲ್ಲ,' 'ವಿಶ್ವದ ಕಾರ್ಮಿಕರೇ ಒಂದಾಗಿ.' ಈ ವಿನೈಲ್ ಬ್ಯಾನರ್‌ಗಳಿಂದ ಯಾರಿಗೆ ಉಪಯೊಗ ಆಗುತ್ತೋ ಇಲ್ಲವೋ, ಆದ್ರೆ ಸ್ಲಮ್‌ನಲ್ಲಿ ವಾಸಿಸುವ ಜನರಿಗಂತೂ ಇವೇ ಆಶ್ರಯವಾಗಿವೆ. ಎಷ್ಟೋ ಗುಡಿಸಲುಗಳಿಗೆ ಮೇಲ್ಛಾವಣಿಗಳಾಗಿವೆ.


ಪರಿಸರಹಾನಿ ತಡೆಗಟ್ಟಲು ನಿಮ್ಮಿಂದ ಅಳಿಲು ಸೇವೆಯನ್ನು ಸಲ್ಲಿಸಬಹುದು. ಅದು ಹೇಗೆ ಅಂತೀರಾ? ಅಕ್ರಮವಾಗಿ (ನಗರಪಾಲಿಕೆ ಮುದ್ರೆ ಇರದ) ಕಟ್ಟಿದ ಬ್ಯಾನರ್‌ಗಳು ಕಂಡು ಬಂದಲ್ಲಿ ಈ ಕೆಳಗಿನ ವಿಳಾಸಕ್ಕೆ ದೂರನ್ನು ನೀಡಬಹುದು.


ಬ್ಯಾನರ್ ಕಟ್ಟಲು ಅನುಮತಿ ಪಡೆಯಲು ಹಾಗೂ ದೂರನ್ನು ನೀಡಬೇಕಾದ ವಿಳಾಸ:
ಜಂಟಿ ಆಯುಕ್ತರು ದಕ್ಷಿಣ
ಬೆಂಗಳೂರು ಮಹಾನಗರ ಪಾಲಿಕೆ
9ನೇ ಅಡ್ಡರಸ್ತೆ,
ಜಯನಗರ 2 ನೇ ಹಂತ,
ಬೆಂಗಳೂರು-11. ದೂರವಾಣಿ: 22975700

Read more...

Sunday, March 9, 2008

ನರಕ ದರ್ಶನ -೫ : ಸರ್ವಶಕ್ತ ಇಲ್ಲಿ ಕಾವಲುಗಾರ


ಬೆಂಗಳೂರು ಗಲೀಜಾಗಿದೆ ಅಂತಾ ಈ ಮುಂಚೆನೇ ತೋರಿಸಿದ್ದರೂ. ಈ ಬಾರಿ ಅದಕ್ಕೆ ಪೂರಕವಾಗಿ ಕಲುಷಿತಗೊಂಡಿರುವ ಬೆಂಗಳೂರಿಗರ ಚಿತ್ರಣ ನೀಡುವ ಪ್ರಯತ್ನ ಇಲ್ಲಿದೆ.

'ಇಲ್ಲಿ ಗಲೀಜು ಮಾಡಬಾರದು; ಮಾಡಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು' ಎಂದು ಗೋಡೆ ಮೇಲೆ ಬರೆದು ಬರೆದು ನಮ್ಮ ಜನಕ್ಕೆ ಸಾಕಾಗಿ ಹೋಗಿದೆ. ಬೆಂಗಳೂರಿನ ಮಹಾನಾಗರೀಕರು ತಮ್ಮ ಮನೆಯ ಗೋಡೆಯ ಸರಂಕ್ಷಣೆಗೆ ಈಗ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಅದೇನೆಂದರೆ ಮನೆಯ ಗೋಡೆಗಳನ್ನು ಕಾಯಲು ಕಾವಲುಗಾರರನ್ನು ನೇಮಿಸಿದ್ದಾರೆ. ಅದೂ ಸಾಮಾನ್ಯದವರಲ್ಲ, ದೇವಾನುದೇವತೆಗಳನ್ನೇ.. ಹುಬ್ಬೇರಿಸಬೇಡಿ... ಇದು ನಿಜ... ಈಗಾಗಲೇ ನೀವು ಈ ದೃಶ್ಯವನ್ನು ನೋಡಿರಬಹುದು.

ನಗರದ ಅನೇಕ ಗೋಡೆಗಳ ಮೇಲೆ ಹಾಕಿರುವ'ದೇವರುಗಳ ಟೈಲ್ಸ್ ಚಿತ್ರವನ್ನು. ಇದರ ಜೊತೆಯಲ್ಲಿ ರೆಡಿಮೇಡ್ ಬರಹ 'ಇಲ್ಲಿ ಗಲೀಜು ಮಾಡಬೇಡಿ, ಒಂದಾ ಮಾಡಬೇಡಿ, ಶಿಕ್ಷೆಗೆ ಗುರಿಪಡಿಸಲಾಗುವುದು'. 'ಇಲ್ಲಿ ಚಿತ್ರವನ್ನು ಅಂಟಿಸಬೇಡಿ' ವಗೈರೆ ವಗೈರೆ......

ದೇವರ ಚಿತ್ರವನ್ನು ಹಾಕುವಲ್ಲಿ ಕೆಲವರಂತೂ ಸರ್ವಧರ್ಮೀಯರಾಗಿರುತ್ತಾರೆ ಎಲ್ಲಾ ಮತದ ದೇವರುಗಳ ಚಿತ್ರ ಯಾ ಧಾರ್ಮಿಕ ಚಿಹ್ನೆಯನ್ನು ಬಳಸುತ್ತಾರೆ. ಕೆಲವರು ವಾಸ್ತು, ದೋಷ ಪರಿಹಾರ ಇನ್ನಿತರ ಕಾರಣ ಹೇಳಿ ಮನೆಯ ಮುಂದೆ ದೇವರ ಪಟ ಹಾಕಿರುವುದನ್ನು ನೋಡಿರಬಹುದು. ಆದರೆ ಮನೆ ಕಾಪೌಂಡ್ ತುಂಬಾ ದೀಪಾವಳಿಯಲ್ಲಿ ದೀಪದ ಸಾಲು ಇಟ್ಟ ಹಾಗೆ ದೇವರ ಚಿತ್ರ ಹಾಕಿ ಜೊತೆಗೆ ಗಲೀಜು ಮಾಡಬೇಡಿ ಅಂತಾ ಹಾಕೋ ಗಲೀಜು ಮನಸ್ಸಿನ ಬೆಂಗಳೂರಿಗೆ ಏನೆಂದು ಹೇಳೋಣ ಹೇಳಿ.

ಅಲ್ಲಾ ಕಂಡ್ರಿ ಸರ್ವಶಕ್ತ, ಸರ್ವವ್ಯಾಪಿ ಎಂದು ದೇವರನ್ನು ಹೇಳುತ್ತೇವೆ. ಅಂತಾ ದೇವರಿಗೆ ಈ ದುರ್ಗತಿ ಬಂದರೆ ಹೇಗೆ ಹೇಳಿ? ದೇವರು ಅಂತಾ ಹೇಳಿದರೆ ಸಾಕು ಪೂಜ್ಯ ಭಾವನೆ ಬರುತ್ತದೆ. ಅದು ಯಾವುದೇ ಧರ್ಮದ ದೇವರಿರಬಹುದು. ದೇವರು ನಿರಾಕಾರ ಅಥವಾ ಆಕಾರವುಳ್ಳವ ನಾಗಿರಬಹುದು ಅದು ಇಲ್ಲಿ ಅಪ್ರಸ್ತುತ. ನನ್ನ ಪ್ರಶ್ನೆ ಇಷ್ಟೆ ಎಲ್ಲರೂ ಪೂಜ್ಯ ಭಾವನೆಯಿಂದ ಕಾಣುವ ದೇವರನ್ನು ತಮ್ಮ ಮನೆಯ ಗೋಡೆಗಳ ಅಂದವ ಕಾಪಾಡುವುದಕ್ಕೋಸ್ಕರ ಬಳಸುವುದು ಸರಿಯೇ?. ದೇವರ ಚಿತ್ರವಿದ್ದರೆ ಭಯದಿಂದಲೋ, ಭಕ್ತಿಯಿಂದಲೋ ಅಥವಾ ಇವೆರಡರ ಮಿಶ್ರಣದಿಂದಲೋ ಏನೋ ಜನ ಗೋಡೆಯ ಮೇಲೆ ಗಲೀಜು ಮಾಡುವುದಿಲ್ಲ ಎಂಬ ದೂ(ದು)ರುದ್ದೇಶ ನಿಮಗಿದ್ದರೆ.. ಇಟ್ಸ್ ವೇರಿ ಬ್ಯಾಡ್... ಬೆಂಗಳೂರಿನ ಬುದ್ಧಿವಂತ (ಅ)ನಾಗರೀಕರೇ ನಿಮ್ಮ ದೇವರು ನಿಮ್ಮ ಮನೆಯ ಒಳಗಿರಲಿ. ಮನದೊಳಗಿರಲಿ. ನಿಮ್ಮ ಮನೆ ಗೋಡೆ ಕಾಯಲಿಕ್ಕೆ ಬಿಡಬೇಡಿ.

ಇದಕ್ಕೆ ಒಂದು ಪೂರಕವಾದ ಮೊಬೈಲ್ ಸಂದೇಶ 'ವಿಶ್ವ ಇಂದು ಸಂಕಷ್ಟದ ಸ್ಥಿತಿಯಲ್ಲಿರುವುದು ಕೆಟ್ಟ ಜನಗಳ ದುಷ್ಟ ಕೆಲಸದಿಂದಲ್ಲ; ಕೆಲಸ ಮಾಡಿದೆ ಸುಮ್ಮನಿರುವ ಬುದ್ಧಿಜೀವಿಗಳಿಂದ'. ನನಗನ್ನಿಸಿದ್ದು ಇದೇ ರೀತಿ ಬೆಂಗಳೂರಿನ ಬುದ್ಧಿಜೀವಿಗಳು(ವಿಶೇಷಣವಾಗಿ ಮಾತ್ರ) ದೇವರನ್ನು ಈ ರೀತಿ ದುಡಿಸಿಕೊಳ್ಳುವುದು ತರವಲ್ಲವೆನಿಸುತ್ತದೆ ನೀವು ಏನಂತೀರಿ?

ಚಿತ್ರ, ಬರಹ: ಮಲೆನಾಡಿಗ

Read more...

Wednesday, March 5, 2008

ನರಕ ದರ್ಶನ -೪:ಇ-ಕಸ ಎಂಬ ಹೈಟೆಕ್ ಕಸಾಸುರ


'ಥೂ! ಬ್ಯಾಟರಿ(ಸೆಲ್) ಹಾಳಾಗಿದೆ ಅದಕ್ಕೆ ಕೈ ಹಾಕಬೇಡ' ಅಂತಾ ಮನೆಯಲ್ಲಿ ಹೇಳಿದ್ರೂನೂ ಕೊಳೆತ ಬ್ಯಾಟರಿಯನ್ನು ತುಂಡು ತುಂಡು ಮಾಡಿ ಒಳಗಿನ ಪುಡಿಯಲ್ಲಿ ಕೈಯಾಡಿಸದಿದ್ದರೆ ಚಿಕ್ಕಂದಿನಲ್ಲಿ ಸಮಾಧಾನ ಸಿಗುತ್ತಿರಲಿಲ್ಲ. ಆದರೆ ಅದು ವಿಷ ಅಂತಾ ಆಗ ಗೊತ್ತಿರಲಿಲ್ಲ. ಹೌದು , ಕಳೆದ ಸಂಚಿಕೆಯಲ್ಲಿನ ಬಂದಿದ್ದ ಕಸಾಸುರ ನನ್ನು ಮೀರಿಸುವ ಇ-ಕಸ (ಹೈಟೆಕ್ ಕಸ) ಎಂಬ ಸ್ಲೋ ಪಾಯಿಸನ್ ಬಗೆಗಿನ ಕರ್ಮಕಾಂಡ ಇಲ್ಲಿದೆ.

ಬೆಂಗಳೂರು ಬೆಳೆದಂತೆಲ್ಲಾ ಐಟಿ ಉದ್ಯಮ,ಎಲೆಕ್ಟ್ರಾನಿಕ್ ಉದ್ಯಮ ಬೆಳೆಯುತ್ತಾ ಹೋಯಿತು. ಅದರ ಜೊತೆಗೆ ಈ ಉದ್ಯಮಗಳಿಂದ ಬಿಸಾಕಲ್ಪಟ್ಟ ಎಲೆಕ್ಟ್ರಾನಿಕ್ ಸಾಮಾಗ್ರಿಗಳು 'ಇ-ಕಸ' ಎಂಬ ಸಂತತಿಗೆ ನಾಂದಿ ಹಾಡಿತು. ಏನಿದು ಇ-ಕಸ?ಮುರಿದ ಎಲೆಕ್ಟ್ರಾನಿಕ್ ಉಪಕರಣಗಳು, ಬೇಡವೆಂದು ಬಿಸಾಕಿದ ಎಲೆಕ್ಟ್ರಾನಿಕ್ಸ್ ಸಾಧನಗಳು ಈ ಸಾಲಿಗೆ ಸೇರುತ್ತವೆ. ಇವುಗಳು ವಿಷಕಾರಿಯಾದ್ದರಿಂದ ಇವುಗಳನ್ನು ಬರಿ ಕಸದ ಸಾಲಿಗೆ ಸೇರಿಸುವಂತಿಲ್ಲ. ಅದಕ್ಕೆ ಇಕಸ ಎಂದು ವರ್ಗೀಕರಿಸುವುದು ಸೂಕ್ತ.

ಮೈಕ್ರೋವೇವ್ ಓವನ್, ಫ್ರೀಜರ್, ವ್ಯಾಕ್ಯೂಮ್ ಕ್ಲೀನರ್, ಟಿವಿ, ಸೀಡಿ ಪ್ಲೇಯರ್, ಟ್ಯೂಬ್ ಲೈಟ್, ಎಲೆಕ್ಟ್ರಾನಿಕ್ ಆಟದ ಸಾಮಾಗ್ರಿ, ವೈದ್ಯಕೀಯಉಪಕರಣಗಳು(ಎಲೆಕ್ಟ್ರಾನಿಕ್), ಕಂಪ್ಯೂಟರ್, ಪ್ರಿಂಟರ್, ಟೆಲಿಫೋನ್, ಮೊಬೈಲ್ ಫೋನ್ ಇತ್ಯಾದಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಬೆಂಗಳೂರಿನಲ್ಲಿ ಎಲ್ಲರಿಗೂ ತಿಳಿದಿರುವಂತೆ ಐಟಿ ಕಂಪೆನಿಗಳು, ದೂರ ಸಂಪರ್ಕ ಕಾರ್ಖಾನೆ, ದೂರವಾಣಿ, ವೈಮಾನಿಕ, ಉಪಗ್ರಹ ತಯಾರಕ ಘಟಕದಿಂದ ಹಿಡಿದು ನಾನಾ ಬಗೆಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಗಳಿವೆ. ಸುಮಾರು ೧,೪೨೨ ವಿದೇಶಿ ಹಾಗೂ ಸ್ವದೇಶಿ ಉದ್ಯಮಗಳಿವೆ. ಈ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ. ಎಲೆಕ್ಟ್ರಾನಿಕ್ ಕಸಗಳಲ್ಲಿ ಕೆಲವನ್ನು ಪುನರ್ಬಳಕೆ ವಸ್ತುಗಳಾಗಿ ಪರಿವರ್ತಿಸಬಹುದಾದರೂ ಈ ಹಿಂದಿನ ಅಂಕಣ ದಲ್ಲಿ ಹೇಳಿದ ಹಾಗೆ, ಕಸ ವಿಲೇವಾರಿ, ವಿಂಗಡಣೆ, ಸಾಗಾಣಿಕೆಯ ಕಾರ್ಯ ಅಸಮರ್ಪಕವಾಗಿರುವುದರಿಂದಕಸ ರಸವಾಗುವುದರ ಬದಲು ವಿಷವಾಗುತ್ತಿದೆ. ಎಲ್ಲಾ ಕಸಕ್ಕೂ ಒಂದೇ ರೀತಿಯ ಉಪಚಾರ ನೀಡುತ್ತಾ ಕಸವನ್ನೆಲ್ಲಾ ಅಗ್ನಿಗೆ ಆಹುತಿ ನೀಡುವುದರಿಂದ ಪರಿಸರಕ್ಕೆ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.

ಯಾವ್ಯಾವ ವಿಷವಿದೆ? ಇ-ಕಸ ದಲ್ಲಿ...

ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಹೆಚ್ಚಾಗಿ ಸೀಸ, ಕ್ಯಾಡ್ಮೀಯಂ, ಪಾದರಸ, ತಾಮ್ರ, ಸತು, ಕ್ರೋಮಿಯಂ,ಇಂಗಾಲ, ಕಬ್ಬಿಣ, ತವರ, ಬೇರಿಯಂ ಮುಂತಾದ ರಾಸಾಯನಿಕ ಪದಾರ್ಥಗಳಿರುತ್ತದೆ. ಜೊತೆಗೆ ಪ್ಲಾಸ್ಟಿಕ್ ಕೂಡ ಎಷ್ಟೋ ಎಲೆಕ್ಟ್ರಾನಿಕ್ ಉಪಕರಣದಲ್ಲಿ ಬಳಕೆ ಆಗುತ್ತದೆ. ಹಾಲೋಜನ್ ಹೊರ ಪದರ ಪ್ಲಾಸ್ಟಿಕ್ ಅನ್ನು ಸಂಸ್ಕರಿಸದಂತೆ ತಡೆ ಹಿಡಿಯುತ್ತದೆ. ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ನಿತ್ಯ ಬಳಕೆಯಾಗುವ ಉಪಕರಣಗಳಾದ ಸಿಆರ್‌ಟಿ ಮಾನೀಟರ್ (ಸೀಸ) , ಬ್ಯಾಟರಿ (ನಿಕ್ಕಲ್ ಕ್ಯಾಡ್ಮೀಯಂ, ಲಿಥಿಯಂ ), ಫ್ಲಾಪಿ ಡಿಸ್ಕ್‌ನಲ್ಲಿರುವ ಕ್ರೊಮಿಯಂ, ಪಿಸಿಬಿ (ಚಿನ್ನ ಹಾಗೂ ಬೆಳ್ಳಿ ಪದರಗಳು, ಪ್ಲಾಸ್ಟಿಕ್, ಸಿಲಿಕಾನ್ ಮುಂತಾದ ಅಲೋಹಗಳು)ಗಳು ತ್ಯಾಜ್ಯ ವಸ್ತುಗಳಾದಾಗ ಅದರಲ್ಲಿನ ಎಲ್ಲಾ ವಿಷಯುಕ್ತ ರಾಸಾಯನಿಕಗಳು ಭೂಮಿಯ ಪದರವನ್ನು ಸೇರುತ್ತವೆ.

ಪ್ರತಿ ವರ್ಷ ಐಟಿ ಕಂಪೆನಿಗಳಲ್ಲಿ ಶೇ. ೩೦ರಷ್ಟು ಉಪಕರಣಗಳು ಬಳಕೆಗೆ ಯೋಗ್ಯತೆಯನ್ನು ಕಳೆದುಕೊಂಡು ಹೊರಹಾಕಲ್ಪಡುತ್ತದೆ. (ಕುಹಕವೆಂದರೆ ಈಗ ಕೆಲಸಗಾರರಿಗೂ ಅದೇ ಮಾನದಂಡ ಬಳಕೆಯಾಗುತ್ತಿದೆ) ಬೆಂಗಳೂರಿನಲ್ಲಿ ಸುಮಾರು ೮,೦೦೦ ಟನ್‌ನಷ್ಟು ಈ ತ್ಯಾಜ್ಯ ಶೇಖರಣೆ ಆಗುತ್ತಿದೆ. ಆದರೆ ಇ ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ವಿಂಗಡಿಸಿ, ಸಂಸ್ಕರಿಸುವ ಘಟಕಗಳ ಕೊರತೆ ಎದುರಾಗಿದೆ. ಬೆಂಗಳೂರಿನಲ್ಲಿ ಸುಮಾರು ೫೦೦ ಕಸ ಸಂಸ್ಕರಿಸುವ ಘಟಕಗಳಿವೆ. ಆದರೆ ಅಲ್ಲಿ ವಿಂಗಡಣೆಯಾಗುವ ತ್ಯಾಜ್ಯವು ಸಂಡೇ ಬಜಾರ್‌ನಲ್ಲೋ,ಬರ್ಮಾ ಬಜಾರ್‌ನಲ್ಲೋ ಸೆಕೆಂಡ್ ಹ್ಯಾಂಡ್ ಉಪಕರಣವಾಗಿ ಬಿಕರಿಯಾಗುತ್ತದೆ. ವೈಜ್ಞಾನಿಕ ಸಂಸ್ಕರಣ ಘಟಕದ ಕೊರತೆ, ವಿತರಕರ ಅಜ್ಞಾನ, ಅಧಿಕಾರಿಗಳ ನಿರ್ಲಕ್ಷ್ಯ ಮುಂತಾದ ಸಮಸ್ಯೆಗಳು ಇ ಕಸದ ಬೆಳವಣಿಗೆಗೆ ಕಾರಣವಾಗಿದೆ.

ಇ- ಕಸವನ್ನು ಸುಡುವುದರಿಂದ ಉಂಟಾಗುವ ವಿಷಕಾರಿ ಉತ್ಪನ್ನಗಳು ಮಾರಕ ರೋಗಗಳಿಗೆ ಈಡುಮಾಡುತ್ತದೆ. ಹೆಚ್ಚುತ್ತಿರುವ ಈ ತ್ಯಾಜ್ಯವನ್ನು ಸುರಕ್ಷಿತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡಲು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೆಲ ಸಂಸ್ಥೆಗಳು ಅಂತೂ ಮುಂದಾಗಿದೆ. ಸ್ವಿಸ್ ಮೂಲದ ಸಂಸ್ಥೆಯ ಜೊತೆ ಸೇರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಕೇಂದ್ರವು ಈ ತ್ಯಾಜ್ಯವನ್ನು ಸಂಸ್ಕರಣೆ ಮಾಡ ಹೊರಟು ಎರಡು ವರ್ಷದ ಮೇಲಾಗಿದೆ.

ದಾಬಾಸ್‌ಪೇಟೆ ಬಳಿ ೧೨೦ ಎಕರೆ ಪ್ರದೇಶದಲ್ಲಿ ಸಂಸ್ಕರಣ ಘಟಕವಿದೆ. ಇಂಡೋ-ಜರ್ಮನ್ ಜಂಟಿ ಯೋಜನೆಗೆ ಹವಾ(ಹಜರ್ಡಸ್ ವೇಸ್ಟ್ ಮ್ಯಾನೇಜ್‌ಮೆಂಟ್ ಪ್ರಾಜೆಕ್ಟ್) ಎಂಬ ಹೆಸರಿನ ಸಂಸ್ಥೆಯ ಸಹಕಾರ ಕೂಡ ಇದಕ್ಕಿದೆ.

ಇ ಕಸದಿಂದ ಆರೋಗ್ಯಕ್ಕೆ ಹಾನಿ

ಬೆಂಗಳೂರಿನಲ್ಲಿ ಪ್ರತಿ ತಿಂಗಳು ೧೦,೦೦೦ ದಿಂದ ೧೨,೦೦೦ ಟನ್‌ನಷ್ಟು ಇ-ಕಸ ಹೊರಬೀಳುತ್ತಿದೆ. ಕಸ ವಿಲೇವಾರಿ ಮಾಡುವವರಿಗೆ ಇಕಸ ಹಾಗೂ ಅದರ ದುಷ್ಪರಿಣಾಮದ ಬಗ್ಗೆ ಜ್ಞಾನವಿಲ್ಲದಿರುವುದರಿಂದ ಮೈಸೂರು ರಸ್ತೆಯ ಸುತ್ತಮುತ್ತ ಇರುವ ವಿತರಕರನ್ನು ದೂರಿದರೆ ಪ್ರಯೋಜನವಿಲ್ಲ. ದಶಕದ ಕೆಳಗೆ ಈ ಬಗ್ಗೆ ನಿಯಮಾವಳಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಕೇಂದ್ರ ರೂಪಿಸಿದ್ದರೂ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ.(ನಿಯಾಮಾವಳಿಗಳು ಸರಿಯಾಗಿ ಕಾಲಕಾಲಕ್ಕೆ ಅಪ್ ಡೇಟ್ ಆಗಿಲ್ಲ) ಕೇಂದ್ರ ಪರಿಸರ ಇಲಾಖೆ ರೂಪಿಸಿರುವ ಪರಿಸರ ಮಾಲಿನ್ಯ ಸಂಬಂಧಿತ ಕಾಯಿದೆಯಲ್ಲಿ ಇ-ಕಸದ ಬಗ್ಗೆ ಉಲ್ಲೇಖವೇ ಇಲ್ಲ.

ಕಸವನ್ನು ವಿತರಕರ ಬಳಿಗೆ ತಂದು ಹಾಕುವವರು ಹೆಚ್ಚಾಗಿ ಬರಿಗೈಯಲ್ಲಿ ಕೆಲಸ ಮಾಡುವುದು ಕಂಡುಬರುತ್ತದೆ. ಈ ಕಸದ ಸಂಪರ್ಕದಿಂದ ನರ ದೌರ್ಬಲ್ಯ, ಕರಳು ಬೇನೆ, ಕಿಡ್ನಿ, ಜನನಾಂಗ, ಮೆದುಳಿಗೆ ಸಂಬಂಧಿಸಿದ ಕಾಯಿಲೆಗೆ ಹಲವಾರು ಜನ ತುತ್ತಾಗುತ್ತಿದ್ದಾರೆ. ಈ ರೀತಿ ಕಸವಿಲೇವಾರಿ ಮಾಡುವವರಲ್ಲಿ ಮಹಿಳೆಯರು ಹಾಗೂ ಮಕ್ಕಳ ಸಂಖ್ಯೆ ಅಧಿಕವಾಗಿರುವುದು ಆತಂಕಕಾರಿ ವಿಷಯ.

ಸುಮಾರು ೧,೪೬,೧೮೦ ಟನ್(೧.೫ ಮಿಲಿಯನ್ ಟನ್!!) ಇ-ತ್ಯಾಜ್ಯ ಪ್ರತಿ ವರ್ಷ ಬೆಂಗಳೂರಿನಲ್ಲಿ ಹೊರಬೀಳುತ್ತಿದೆ. ಇದರಲ್ಲಿ ಬೇರೆಡೆಯಿಂದ ಆಮದಾಗುವ ಎಲೆಕ್ಟ್ರಾನಿಕ್ ತ್ಯಾಜ್ಯಗಳು ಸೇರಿಲ್ಲ. ತಂತ್ರಜ್ಞಾನ ಬೆಳೆದ ಹಾಗೆ. ಉದ್ಯಮದಿಂದ ಹೊರಬೀಳುವ ಕಸದ ಜೊತೆಗೆ ಗೃಹೋಪಯೋಗಿ ವಸ್ತುಗಳಿಂದ ಉಂಟಾಗುವ ಈ ತ್ಯಾಜ್ಯವು ದಿನೇ ದಿನೇ ಅಧಿಕವಾಗುತ್ತಿದೆ. ಪಿಸಿಬಿಗಳಲ್ಲಿ ಸಿಗುವ ಚಿನ್ನ, ಪ್ಲಾಟಿನಂ,ಬೆಳ್ಳಿ ಮುಂತಾದ ಬೆಲೆಬಾಳುವ ಲೋಹಗಳನ್ನು ಪಡೆಯುವ ಆಸೆಯಿಂದ ಕೆಲವು ಆಮ್ಲಗಳನ್ನು ಬಳಕೆ ಮಾಡಿ ಚಿನ್ನ ಸಿಕ್ಕಿತೆಂದು ಸಂತಸಪಡುವ ಕಸ ವಿಲೇವಾರಿ ಮಾಡುವವರಿಗೆ, ಇದರಿಂದ ಆರೋಗ್ಯಕ್ಕೆ ಆಗುವ ತೊಂದತ್ರೆ ಬಗ್ಗೆ ತಿಳಿದಿರುವುದೇ ಇಲ್ಲ.

ಪರಿಸರ ಹಾಗೂ ವಾತವರಣವನ್ನು ಹಾಳುಮಾಡುವುದರ ಜೊತೆಗೆ ವಿಷಯುಕ್ತ ಈ ತ್ಯಾಜ್ಯಭೂಮಿಯೊಳಗೆ ಸೇರಿ ಕೊನೆಗೆ ಆಹಾರ ಪದಾರ್ಥವಾಗಿ ನಮ್ಮ ಹೊಟ್ಟೆ ಸೇರುತ್ತಿವೆ. ಈ ತ್ಯಾಜ್ಯದ ಬಗ್ಗೆ ಕೆಲವು ಐಟಿ ಕಂಪೆನಿಗಳು ಗಮನಹರಿಸಿದ್ದರೂ ಸರ್ಕಾರದ ನಿರ್ಲಕ್ಷ್ಯ ಹಾಗೂ ಸಾಮಾನ್ಯ ಜನರ ಅಜ್ಞಾನದಿಂದಾಗಿ ಈ ಕಸವೆಂಬ ಸ್ಲೋ ಪಾಯ್ಸನ್ ಎಲ್ಲೆಡೆ ಆವರಿಸುತ್ತಿದೆ. ಐಟಿ ಮಹಾಜನಗಳೇ, ಇನ್ನೊಮ್ಮೆ ಮುರಿದ ಸೀಡಿ, ಫ್ಲಾಪಿಗಳನ್ನು ಎಸೆಯುವ ಮುಂಚೆ ಸ್ವಲ್ಪ ಯೋಚಿಸಿ...

ಲೇಖನ:ಮಲೆನಾಡಿಗ
ಫೋಟೋ :ಅಂತರ್ಜಾಲ ಪುಟಗಳಿಂದ

Read more...

Saturday, March 1, 2008

ನರಕ ದರ್ಶನ -೩: ಕಸಾಸುರ

ಜೂಜು , ಶೌಚ ಸಮಸ್ಯೆ ಯಾಯಿತು ಈಗ ಸೈಲೆಂಟಾದ ಹೆಮ್ಮಾರಿ....ಕಸಾಸುರ ನಿಮ್ಮ ಮುಂದೆ....ಬೆಂಗಳೂರಿನ ಎಲ್ಲೆಡೆ ಇರುವ ಪ್ರಮುಖ ಸಮಸ್ಯೆ ಕಸ ವಿಲೇವಾರಿ. ಕಸ ಹಾಕಲು ಜಾಗ ಹುಡುಕ ಬೇಕಾಗಿಲ್ಲ ಪಕ್ಕದಮನೆ ಖಾಲಿ ಸೈಟ್ ಸದಾ ಸಿದ್ಧ ಇರುತ್ತೆ, ಇಲ್ಲಾಂದ್ರೆ ಹತ್ತಿರದ ಚರಂಡಿಯಂತೂ ಸಿಗುತ್ತದೆ. ನಗರ ಪ್ರದೇಶದಲ್ಲಿ ಈಗಂತೂ ಖಾಲಿ ಸೈಟ್ ಸಿಗೋದು ಕಷ್ಟ. ಮತ್ತೆ ಎಲ್ಲಿ ಹಾಕೋದು ಜಾಗನೇ ಇಲ್ಲಾ ಅಂತಿರಾ. ನಮ್ಮ ನಾಗರೀಕರಿಗೆ ಕಸ ಹಾಕೋಕೆ ಕಷ್ಟ ಆಗದೇ ಇರಲಿ ಅನ್ನೋ ದೂರಾಲೋಚನೆಯಿಂದ ಸರ್ಕಾರ ತಳ್ಳು ಗಾಡಿಗಳನ್ನು ನಿರ್ಮಿಸಿ ಕೆಲಸಕ್ಕೆ ಜನರನ್ನು ನೇಮಿಸಿತು. ದಿನ ಬೆಳಗ್ಗೆ ತಪ್ಪದೇ ಹಾಜರಾಗುವ ಇವರು (ತಿಂಗಳ ಮೊದಲ ವಾರವಂತೂ ಖಂಡಿತಾ. ಬೆಳಗ್ಗೆ ನೀವು ಕಾಫೀ ಹೀರುವುದರೊಳಗೆ ಹಾಜರ್) ಕಸವನ್ನು ಸಂಗ್ರಹಿಸಿ ಸಾಗಿಸುವ ರೀತಿ ವರ್ಣನಾತೀತ.

ಇವರಿಗೆ ಪಾಲಿಕೆಯ ಸಂಬಳದ ಜೊತೆಗೆ ಇವರು ಗಾಡಿ ಸಾಗುವ ಹಾದಿಯ ಮನೆಯವರಿಂದಲೂ ಹಣ ವಸೂಲಿ ಮಾಡುತ್ತಾರೆ. ಇವರು ಗುತ್ತಿಗೆ ಆಧಾರಿತ ಕೆಲಸಗಾರರೇ ಇರಬಹುದು. ಕೆಲವರು ಪರ್ಮನೆಂಟ್ ನೌಕರರೇ ಇರಬಹುದು. ಸಂಬಳದ ಜೊತೆಗೆ ಗಿಂಬಳ ಯಾಕೆ. ಇವರಿಂದ ಸಂಗ್ರಹವಾದ ಕಸವನ್ನು ಮಾನ್ಯ ಬಿಸಿಸಿ ಲಾರಿಗಳು ಒತ್ತೊಯ್ದು ಎಲ್ಲಿಗೆ ಮುಟ್ಟಿಸುತ್ತವೆ ಅನ್ನೊದೆ ಪ್ರಶ್ನೆ? ದಾರಿಯುದ್ದಕ್ಕೂ ಕಸದ ರಸವನ್ನು, ಅದರ ಪರಿಮಳವನ್ನು ಎಲ್ಲೆಡೆ ಹರಡುತ್ತಾ, ಸಂಚರಿಸುವ ಲಾರಿಗಳು ಎಲ್ಲರನ್ನೂ ಮೂಗು ಹಿಡಿಯುವಂತೆ ಮಾಡುವುದಂತೂ ನಿಜ.

ಈ ಕಸವನ್ನೆಲ್ಲಾ ಬೇರ್ಪಡಿಸುವ ಕಾರ್ಯ ನಿಜಕ್ಕೂ ಸಾಹಸವೇ ಸರಿ. ಆದರೆ ಬೇರ್ಪಡಿಸುವ ಕಾರ್ಯ ಸರಿಯಾಗಿ ನಡೆಯುತ್ತಿದೆಯೇ? ಇಲ್ಲವೇ. ಕಸ ಬೇರ್ಪಡಿಸುವವರಿಗೆ ಕಸ ವಿಗಂಡಿಸುವ ಕನಿಷ್ಠ ಜ್ಞಾನ ಇದೆಯೇ ಇಲ್ಲವೇ ಪ್ರಶ್ನಾತೀತವಾಗಿ ಸಾಗಿದೆ ಕಸಾಸುರನ ಹಾವಳಿ. ನಾಗರೀಕರಿಂದ ಪ್ಲಾಸ್ಟಿಕ್ ಚೀಲಕ್ಕೆ ಸೇರುವ ಕಸ , ತಳ್ಳು ಗಾಡಿಯಲ್ಲಿ ಸಾಗಿ, ಲಾರಿಯಲ್ಲಿ ಸವಾರಿ ಮಾಡಿ ದೊಡ್ಡ ಕಸದ ರಾಶಿಯನ್ನು ಸೇರಿದ ಮೇಲೂ ಕಸದಿಂದ ಪ್ಲಾಸ್ಟಿಕ್ ಬೇರ್ಪಡುವುದು ತುಂಬಾ ವಿರಳ. ಹೋಗಲಿ ಈ ಕಸದ ರಾಶಿಗೆ ಬೇಲಿಯನ್ನು ಹಾಕುವುದಿಲ್ಲ. ಹಾದಿ -ಬೀದಿಯಲ್ಲಿಯ ಹಸು, ನಾಯಿ ಮುಂತಾದ ಪ್ರಾಣಿಗಳಿಗೆ ಆಹಾರದ ಜೊತೆ ಪ್ಲಾಸ್ಟಿಕ್ ಎಂಬ ವಿಷವನ್ನು ಉಣಿಸುವಲ್ಲಿ ಯಾರ್‍ಯಾರ ತಪ್ಪು ಅಡಗಿದೆಯೋ ನೀವೇ ನಿರ್ಧರಿಸಿ.

ಈಗಾಗಲೇ ಆಹಾರದ ಜೊತೆ ಪ್ಲಾಸ್ಟಿಕ್ ಸೇವಿಸಿ ಅರಗಿಸಿಕೊಳ್ಳಲಾಗದೇ ಮೃತಪಟ್ಟ ಪ್ರಾಣಿಗಳ ವ್ಯಥೆಯನ್ನು ಓದಿರಬಹುದು. 'ಪರಿಸರ ಸಂರಕ್ಷಿಸಿ ಪ್ಲಾಸ್ಟಿಕ್ ನಿಷೇಧಿಸಿ' ಎಂಬುದು ಘೋಷೆಣೆಗೆ ಮಾತ್ರ ಸೀಮಿತವಾಗಿರುವುದು ವಿಷಾದನೀಯ. ಬೆಂಗಳೂರು ಬೆಳೆಯುತ್ತಿದ್ದಂತೆ ಕಸದ ಸಮಸ್ಯೆ
ಹೆಚ್ಚಾಗುತ್ತಿದೆ. ಐಟಿ ಕಂಪೆನಿಗಳಿಂದ ಹೊರ ಹಾಕಲ್ಪಡುವ ದುಬಾರಿ ಇ-ಕಸದ ಬಗ್ಗೆ ಹೇಳ ಹೊರಟರೆ ಈ ಅಂಕಣದ ಮಿತಿ ಮೀರುತ್ತೆ ಬಿಡಿ. ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಪ್ರತಿವರ್ಷ೪೦ ಮಿಲಿಯನ್ ಟನ್ ಕಸ ಉತ್ಪಾದನೆ ಆಗುತ್ತದೆ. ಬೆಂಗಳೂರಿನಲ್ಲಿ ೨,೧೩೦ ಟನ್ ಕಸ ಪ್ರತಿ ದಿನ ಹೊರ ಬೀಳುತ್ತಿದೆ.

ತ್ಯಾಜ್ಯ ವಸ್ತುಗಳಿಂದ ವಿದ್ಯುತ್ ಉತ್ಪಾದಿಸುವ ಘಟಕ ದಿನವೊಂದಕ್ಕೆ ೧,೦೦೦ ಟನ್ ಬಳಸಿ ೮ ಮೆಗಾ. ವ್ಯಾಟ್ ವಿದ್ಯುತ್ ತಯಾರಿಸುವ ಸಾಮರ್ಥ್ಯ ಹೊಂದಿರುತ್ತದೆ. ಈ ರೀತಿಯ ಘಟಕ ಬೆಂಗಳೂರಿನ ಹೊಸಕೋಟೆ ಸಮೀಪವಿದೆ. ಆದರೆ ಇದರ ಉಪಯೋಗ ಸರಿಯಾಗಿ ಆಗುತ್ತಿಲ್ಲ ಎಂಬುದು ಪರಿಸರವಾದಿಗಳ ದೂರು.

ಕಸ ಹಾಕದೇ ಇರೋಕೆ ಸಾಧ್ಯವಿಲ್ಲ ಬಿಡಿ. ಆದರೆ ಕಸದ ಪ್ರಮಾಣ ಹಾಗೂ ವಿಂಗಡಣೆಯನ್ನು ಪ್ರತಿ ಮನೆಯವರೂ ಮಾಡಿದರೆ ಕಸ ವಿಲೇವಾರಿ ಮಾಡುವವರಿಗೆ ಅನುಕೂಲವಾಗುತ್ತದೆ. ತನ್ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗುತ್ತದೆ. ಪುನರ್ ಬಳಕೆ ಮಾಡಲಾಗದಂತಹ ವಿಷಯುಕ್ತ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ವಿಷಯುಕ್ತ ಕಸವನ್ನು ತಿಂದು ಪ್ರಾಣಕಳೆದುಕೊಳ್ಳುವ ಮೂಕಪ್ರಾಣಿಗಳನ್ನು ರಕ್ಷಿಸುವ ಹೊಣೆ ಬೆಂಗಳೂರು ನಾಗರೀಕರಿಗೆ ಇದೆ ಅನಿಸುತ್ತದೆ. ಈ ಸಂದರ್ಭದಲ್ಲಿ ಹಂಸಲೇಖರ ಹಾಡಿನ ಒಂದು ಸಾಲು ನೆನಪಿಗೆ ಬರುತ್ತದೆ... 'ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ ನಾವೇ ಮೂಢರಾದರೆ ಜ್ಞಾನಕ್ಕೆಲ್ಲಿ ಪೂಜ್ಯತೆ.. ನಾಗರೀಕರಾದ ಮೇಲೆ ಸುಗುಣರಾಗಬೇಕು' ಇನ್ನೊಮ್ಮೆ ಕಸ ಹೊರಹಾಕುವ ಮುನ್ನ ಯೋಚಿಸಿ.

ಲೇಖನ:ಮಲೆನಾಡಿಗ
ಚಿತ್ರಗಳು: ವೀರೇಶ್ ಹೊಗೆಸೊಪ್ಪಿನವರ

Read more...

ವಿಡಿಯೋ ಸಾಲು

Loading...

ಹಾಡು ಕೇಳಿ

ಟ್ರಾಫಿಕ್ ಮಾಹಿತಿ

  © Free Blogger Templates Spain by Ourblogtemplates.com 2008

Back to TOP