Wednesday, March 5, 2008

ನರಕ ದರ್ಶನ -೪:ಇ-ಕಸ ಎಂಬ ಹೈಟೆಕ್ ಕಸಾಸುರ


'ಥೂ! ಬ್ಯಾಟರಿ(ಸೆಲ್) ಹಾಳಾಗಿದೆ ಅದಕ್ಕೆ ಕೈ ಹಾಕಬೇಡ' ಅಂತಾ ಮನೆಯಲ್ಲಿ ಹೇಳಿದ್ರೂನೂ ಕೊಳೆತ ಬ್ಯಾಟರಿಯನ್ನು ತುಂಡು ತುಂಡು ಮಾಡಿ ಒಳಗಿನ ಪುಡಿಯಲ್ಲಿ ಕೈಯಾಡಿಸದಿದ್ದರೆ ಚಿಕ್ಕಂದಿನಲ್ಲಿ ಸಮಾಧಾನ ಸಿಗುತ್ತಿರಲಿಲ್ಲ. ಆದರೆ ಅದು ವಿಷ ಅಂತಾ ಆಗ ಗೊತ್ತಿರಲಿಲ್ಲ. ಹೌದು , ಕಳೆದ ಸಂಚಿಕೆಯಲ್ಲಿನ ಬಂದಿದ್ದ ಕಸಾಸುರ ನನ್ನು ಮೀರಿಸುವ ಇ-ಕಸ (ಹೈಟೆಕ್ ಕಸ) ಎಂಬ ಸ್ಲೋ ಪಾಯಿಸನ್ ಬಗೆಗಿನ ಕರ್ಮಕಾಂಡ ಇಲ್ಲಿದೆ.

ಬೆಂಗಳೂರು ಬೆಳೆದಂತೆಲ್ಲಾ ಐಟಿ ಉದ್ಯಮ,ಎಲೆಕ್ಟ್ರಾನಿಕ್ ಉದ್ಯಮ ಬೆಳೆಯುತ್ತಾ ಹೋಯಿತು. ಅದರ ಜೊತೆಗೆ ಈ ಉದ್ಯಮಗಳಿಂದ ಬಿಸಾಕಲ್ಪಟ್ಟ ಎಲೆಕ್ಟ್ರಾನಿಕ್ ಸಾಮಾಗ್ರಿಗಳು 'ಇ-ಕಸ' ಎಂಬ ಸಂತತಿಗೆ ನಾಂದಿ ಹಾಡಿತು. ಏನಿದು ಇ-ಕಸ?ಮುರಿದ ಎಲೆಕ್ಟ್ರಾನಿಕ್ ಉಪಕರಣಗಳು, ಬೇಡವೆಂದು ಬಿಸಾಕಿದ ಎಲೆಕ್ಟ್ರಾನಿಕ್ಸ್ ಸಾಧನಗಳು ಈ ಸಾಲಿಗೆ ಸೇರುತ್ತವೆ. ಇವುಗಳು ವಿಷಕಾರಿಯಾದ್ದರಿಂದ ಇವುಗಳನ್ನು ಬರಿ ಕಸದ ಸಾಲಿಗೆ ಸೇರಿಸುವಂತಿಲ್ಲ. ಅದಕ್ಕೆ ಇಕಸ ಎಂದು ವರ್ಗೀಕರಿಸುವುದು ಸೂಕ್ತ.

ಮೈಕ್ರೋವೇವ್ ಓವನ್, ಫ್ರೀಜರ್, ವ್ಯಾಕ್ಯೂಮ್ ಕ್ಲೀನರ್, ಟಿವಿ, ಸೀಡಿ ಪ್ಲೇಯರ್, ಟ್ಯೂಬ್ ಲೈಟ್, ಎಲೆಕ್ಟ್ರಾನಿಕ್ ಆಟದ ಸಾಮಾಗ್ರಿ, ವೈದ್ಯಕೀಯಉಪಕರಣಗಳು(ಎಲೆಕ್ಟ್ರಾನಿಕ್), ಕಂಪ್ಯೂಟರ್, ಪ್ರಿಂಟರ್, ಟೆಲಿಫೋನ್, ಮೊಬೈಲ್ ಫೋನ್ ಇತ್ಯಾದಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಬೆಂಗಳೂರಿನಲ್ಲಿ ಎಲ್ಲರಿಗೂ ತಿಳಿದಿರುವಂತೆ ಐಟಿ ಕಂಪೆನಿಗಳು, ದೂರ ಸಂಪರ್ಕ ಕಾರ್ಖಾನೆ, ದೂರವಾಣಿ, ವೈಮಾನಿಕ, ಉಪಗ್ರಹ ತಯಾರಕ ಘಟಕದಿಂದ ಹಿಡಿದು ನಾನಾ ಬಗೆಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಗಳಿವೆ. ಸುಮಾರು ೧,೪೨೨ ವಿದೇಶಿ ಹಾಗೂ ಸ್ವದೇಶಿ ಉದ್ಯಮಗಳಿವೆ. ಈ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ. ಎಲೆಕ್ಟ್ರಾನಿಕ್ ಕಸಗಳಲ್ಲಿ ಕೆಲವನ್ನು ಪುನರ್ಬಳಕೆ ವಸ್ತುಗಳಾಗಿ ಪರಿವರ್ತಿಸಬಹುದಾದರೂ ಈ ಹಿಂದಿನ ಅಂಕಣ ದಲ್ಲಿ ಹೇಳಿದ ಹಾಗೆ, ಕಸ ವಿಲೇವಾರಿ, ವಿಂಗಡಣೆ, ಸಾಗಾಣಿಕೆಯ ಕಾರ್ಯ ಅಸಮರ್ಪಕವಾಗಿರುವುದರಿಂದಕಸ ರಸವಾಗುವುದರ ಬದಲು ವಿಷವಾಗುತ್ತಿದೆ. ಎಲ್ಲಾ ಕಸಕ್ಕೂ ಒಂದೇ ರೀತಿಯ ಉಪಚಾರ ನೀಡುತ್ತಾ ಕಸವನ್ನೆಲ್ಲಾ ಅಗ್ನಿಗೆ ಆಹುತಿ ನೀಡುವುದರಿಂದ ಪರಿಸರಕ್ಕೆ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.

ಯಾವ್ಯಾವ ವಿಷವಿದೆ? ಇ-ಕಸ ದಲ್ಲಿ...

ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಹೆಚ್ಚಾಗಿ ಸೀಸ, ಕ್ಯಾಡ್ಮೀಯಂ, ಪಾದರಸ, ತಾಮ್ರ, ಸತು, ಕ್ರೋಮಿಯಂ,ಇಂಗಾಲ, ಕಬ್ಬಿಣ, ತವರ, ಬೇರಿಯಂ ಮುಂತಾದ ರಾಸಾಯನಿಕ ಪದಾರ್ಥಗಳಿರುತ್ತದೆ. ಜೊತೆಗೆ ಪ್ಲಾಸ್ಟಿಕ್ ಕೂಡ ಎಷ್ಟೋ ಎಲೆಕ್ಟ್ರಾನಿಕ್ ಉಪಕರಣದಲ್ಲಿ ಬಳಕೆ ಆಗುತ್ತದೆ. ಹಾಲೋಜನ್ ಹೊರ ಪದರ ಪ್ಲಾಸ್ಟಿಕ್ ಅನ್ನು ಸಂಸ್ಕರಿಸದಂತೆ ತಡೆ ಹಿಡಿಯುತ್ತದೆ. ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ನಿತ್ಯ ಬಳಕೆಯಾಗುವ ಉಪಕರಣಗಳಾದ ಸಿಆರ್‌ಟಿ ಮಾನೀಟರ್ (ಸೀಸ) , ಬ್ಯಾಟರಿ (ನಿಕ್ಕಲ್ ಕ್ಯಾಡ್ಮೀಯಂ, ಲಿಥಿಯಂ ), ಫ್ಲಾಪಿ ಡಿಸ್ಕ್‌ನಲ್ಲಿರುವ ಕ್ರೊಮಿಯಂ, ಪಿಸಿಬಿ (ಚಿನ್ನ ಹಾಗೂ ಬೆಳ್ಳಿ ಪದರಗಳು, ಪ್ಲಾಸ್ಟಿಕ್, ಸಿಲಿಕಾನ್ ಮುಂತಾದ ಅಲೋಹಗಳು)ಗಳು ತ್ಯಾಜ್ಯ ವಸ್ತುಗಳಾದಾಗ ಅದರಲ್ಲಿನ ಎಲ್ಲಾ ವಿಷಯುಕ್ತ ರಾಸಾಯನಿಕಗಳು ಭೂಮಿಯ ಪದರವನ್ನು ಸೇರುತ್ತವೆ.

ಪ್ರತಿ ವರ್ಷ ಐಟಿ ಕಂಪೆನಿಗಳಲ್ಲಿ ಶೇ. ೩೦ರಷ್ಟು ಉಪಕರಣಗಳು ಬಳಕೆಗೆ ಯೋಗ್ಯತೆಯನ್ನು ಕಳೆದುಕೊಂಡು ಹೊರಹಾಕಲ್ಪಡುತ್ತದೆ. (ಕುಹಕವೆಂದರೆ ಈಗ ಕೆಲಸಗಾರರಿಗೂ ಅದೇ ಮಾನದಂಡ ಬಳಕೆಯಾಗುತ್ತಿದೆ) ಬೆಂಗಳೂರಿನಲ್ಲಿ ಸುಮಾರು ೮,೦೦೦ ಟನ್‌ನಷ್ಟು ಈ ತ್ಯಾಜ್ಯ ಶೇಖರಣೆ ಆಗುತ್ತಿದೆ. ಆದರೆ ಇ ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ವಿಂಗಡಿಸಿ, ಸಂಸ್ಕರಿಸುವ ಘಟಕಗಳ ಕೊರತೆ ಎದುರಾಗಿದೆ. ಬೆಂಗಳೂರಿನಲ್ಲಿ ಸುಮಾರು ೫೦೦ ಕಸ ಸಂಸ್ಕರಿಸುವ ಘಟಕಗಳಿವೆ. ಆದರೆ ಅಲ್ಲಿ ವಿಂಗಡಣೆಯಾಗುವ ತ್ಯಾಜ್ಯವು ಸಂಡೇ ಬಜಾರ್‌ನಲ್ಲೋ,ಬರ್ಮಾ ಬಜಾರ್‌ನಲ್ಲೋ ಸೆಕೆಂಡ್ ಹ್ಯಾಂಡ್ ಉಪಕರಣವಾಗಿ ಬಿಕರಿಯಾಗುತ್ತದೆ. ವೈಜ್ಞಾನಿಕ ಸಂಸ್ಕರಣ ಘಟಕದ ಕೊರತೆ, ವಿತರಕರ ಅಜ್ಞಾನ, ಅಧಿಕಾರಿಗಳ ನಿರ್ಲಕ್ಷ್ಯ ಮುಂತಾದ ಸಮಸ್ಯೆಗಳು ಇ ಕಸದ ಬೆಳವಣಿಗೆಗೆ ಕಾರಣವಾಗಿದೆ.

ಇ- ಕಸವನ್ನು ಸುಡುವುದರಿಂದ ಉಂಟಾಗುವ ವಿಷಕಾರಿ ಉತ್ಪನ್ನಗಳು ಮಾರಕ ರೋಗಗಳಿಗೆ ಈಡುಮಾಡುತ್ತದೆ. ಹೆಚ್ಚುತ್ತಿರುವ ಈ ತ್ಯಾಜ್ಯವನ್ನು ಸುರಕ್ಷಿತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡಲು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೆಲ ಸಂಸ್ಥೆಗಳು ಅಂತೂ ಮುಂದಾಗಿದೆ. ಸ್ವಿಸ್ ಮೂಲದ ಸಂಸ್ಥೆಯ ಜೊತೆ ಸೇರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಕೇಂದ್ರವು ಈ ತ್ಯಾಜ್ಯವನ್ನು ಸಂಸ್ಕರಣೆ ಮಾಡ ಹೊರಟು ಎರಡು ವರ್ಷದ ಮೇಲಾಗಿದೆ.

ದಾಬಾಸ್‌ಪೇಟೆ ಬಳಿ ೧೨೦ ಎಕರೆ ಪ್ರದೇಶದಲ್ಲಿ ಸಂಸ್ಕರಣ ಘಟಕವಿದೆ. ಇಂಡೋ-ಜರ್ಮನ್ ಜಂಟಿ ಯೋಜನೆಗೆ ಹವಾ(ಹಜರ್ಡಸ್ ವೇಸ್ಟ್ ಮ್ಯಾನೇಜ್‌ಮೆಂಟ್ ಪ್ರಾಜೆಕ್ಟ್) ಎಂಬ ಹೆಸರಿನ ಸಂಸ್ಥೆಯ ಸಹಕಾರ ಕೂಡ ಇದಕ್ಕಿದೆ.

ಇ ಕಸದಿಂದ ಆರೋಗ್ಯಕ್ಕೆ ಹಾನಿ

ಬೆಂಗಳೂರಿನಲ್ಲಿ ಪ್ರತಿ ತಿಂಗಳು ೧೦,೦೦೦ ದಿಂದ ೧೨,೦೦೦ ಟನ್‌ನಷ್ಟು ಇ-ಕಸ ಹೊರಬೀಳುತ್ತಿದೆ. ಕಸ ವಿಲೇವಾರಿ ಮಾಡುವವರಿಗೆ ಇಕಸ ಹಾಗೂ ಅದರ ದುಷ್ಪರಿಣಾಮದ ಬಗ್ಗೆ ಜ್ಞಾನವಿಲ್ಲದಿರುವುದರಿಂದ ಮೈಸೂರು ರಸ್ತೆಯ ಸುತ್ತಮುತ್ತ ಇರುವ ವಿತರಕರನ್ನು ದೂರಿದರೆ ಪ್ರಯೋಜನವಿಲ್ಲ. ದಶಕದ ಕೆಳಗೆ ಈ ಬಗ್ಗೆ ನಿಯಮಾವಳಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಕೇಂದ್ರ ರೂಪಿಸಿದ್ದರೂ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ.(ನಿಯಾಮಾವಳಿಗಳು ಸರಿಯಾಗಿ ಕಾಲಕಾಲಕ್ಕೆ ಅಪ್ ಡೇಟ್ ಆಗಿಲ್ಲ) ಕೇಂದ್ರ ಪರಿಸರ ಇಲಾಖೆ ರೂಪಿಸಿರುವ ಪರಿಸರ ಮಾಲಿನ್ಯ ಸಂಬಂಧಿತ ಕಾಯಿದೆಯಲ್ಲಿ ಇ-ಕಸದ ಬಗ್ಗೆ ಉಲ್ಲೇಖವೇ ಇಲ್ಲ.

ಕಸವನ್ನು ವಿತರಕರ ಬಳಿಗೆ ತಂದು ಹಾಕುವವರು ಹೆಚ್ಚಾಗಿ ಬರಿಗೈಯಲ್ಲಿ ಕೆಲಸ ಮಾಡುವುದು ಕಂಡುಬರುತ್ತದೆ. ಈ ಕಸದ ಸಂಪರ್ಕದಿಂದ ನರ ದೌರ್ಬಲ್ಯ, ಕರಳು ಬೇನೆ, ಕಿಡ್ನಿ, ಜನನಾಂಗ, ಮೆದುಳಿಗೆ ಸಂಬಂಧಿಸಿದ ಕಾಯಿಲೆಗೆ ಹಲವಾರು ಜನ ತುತ್ತಾಗುತ್ತಿದ್ದಾರೆ. ಈ ರೀತಿ ಕಸವಿಲೇವಾರಿ ಮಾಡುವವರಲ್ಲಿ ಮಹಿಳೆಯರು ಹಾಗೂ ಮಕ್ಕಳ ಸಂಖ್ಯೆ ಅಧಿಕವಾಗಿರುವುದು ಆತಂಕಕಾರಿ ವಿಷಯ.

ಸುಮಾರು ೧,೪೬,೧೮೦ ಟನ್(೧.೫ ಮಿಲಿಯನ್ ಟನ್!!) ಇ-ತ್ಯಾಜ್ಯ ಪ್ರತಿ ವರ್ಷ ಬೆಂಗಳೂರಿನಲ್ಲಿ ಹೊರಬೀಳುತ್ತಿದೆ. ಇದರಲ್ಲಿ ಬೇರೆಡೆಯಿಂದ ಆಮದಾಗುವ ಎಲೆಕ್ಟ್ರಾನಿಕ್ ತ್ಯಾಜ್ಯಗಳು ಸೇರಿಲ್ಲ. ತಂತ್ರಜ್ಞಾನ ಬೆಳೆದ ಹಾಗೆ. ಉದ್ಯಮದಿಂದ ಹೊರಬೀಳುವ ಕಸದ ಜೊತೆಗೆ ಗೃಹೋಪಯೋಗಿ ವಸ್ತುಗಳಿಂದ ಉಂಟಾಗುವ ಈ ತ್ಯಾಜ್ಯವು ದಿನೇ ದಿನೇ ಅಧಿಕವಾಗುತ್ತಿದೆ. ಪಿಸಿಬಿಗಳಲ್ಲಿ ಸಿಗುವ ಚಿನ್ನ, ಪ್ಲಾಟಿನಂ,ಬೆಳ್ಳಿ ಮುಂತಾದ ಬೆಲೆಬಾಳುವ ಲೋಹಗಳನ್ನು ಪಡೆಯುವ ಆಸೆಯಿಂದ ಕೆಲವು ಆಮ್ಲಗಳನ್ನು ಬಳಕೆ ಮಾಡಿ ಚಿನ್ನ ಸಿಕ್ಕಿತೆಂದು ಸಂತಸಪಡುವ ಕಸ ವಿಲೇವಾರಿ ಮಾಡುವವರಿಗೆ, ಇದರಿಂದ ಆರೋಗ್ಯಕ್ಕೆ ಆಗುವ ತೊಂದತ್ರೆ ಬಗ್ಗೆ ತಿಳಿದಿರುವುದೇ ಇಲ್ಲ.

ಪರಿಸರ ಹಾಗೂ ವಾತವರಣವನ್ನು ಹಾಳುಮಾಡುವುದರ ಜೊತೆಗೆ ವಿಷಯುಕ್ತ ಈ ತ್ಯಾಜ್ಯಭೂಮಿಯೊಳಗೆ ಸೇರಿ ಕೊನೆಗೆ ಆಹಾರ ಪದಾರ್ಥವಾಗಿ ನಮ್ಮ ಹೊಟ್ಟೆ ಸೇರುತ್ತಿವೆ. ಈ ತ್ಯಾಜ್ಯದ ಬಗ್ಗೆ ಕೆಲವು ಐಟಿ ಕಂಪೆನಿಗಳು ಗಮನಹರಿಸಿದ್ದರೂ ಸರ್ಕಾರದ ನಿರ್ಲಕ್ಷ್ಯ ಹಾಗೂ ಸಾಮಾನ್ಯ ಜನರ ಅಜ್ಞಾನದಿಂದಾಗಿ ಈ ಕಸವೆಂಬ ಸ್ಲೋ ಪಾಯ್ಸನ್ ಎಲ್ಲೆಡೆ ಆವರಿಸುತ್ತಿದೆ. ಐಟಿ ಮಹಾಜನಗಳೇ, ಇನ್ನೊಮ್ಮೆ ಮುರಿದ ಸೀಡಿ, ಫ್ಲಾಪಿಗಳನ್ನು ಎಸೆಯುವ ಮುಂಚೆ ಸ್ವಲ್ಪ ಯೋಚಿಸಿ...

ಲೇಖನ:ಮಲೆನಾಡಿಗ
ಫೋಟೋ :ಅಂತರ್ಜಾಲ ಪುಟಗಳಿಂದ

0 comments:

ವಿಡಿಯೋ ಸಾಲು

Loading...

ಹಾಡು ಕೇಳಿ

ಟ್ರಾಫಿಕ್ ಮಾಹಿತಿ

  © Free Blogger Templates Spain by Ourblogtemplates.com 2008

Back to TOP