Saturday, March 15, 2008

ನರಕದರ್ಶನ : ಬಣ್ಣ ಬಣ್ಣದ ವಿನೈಲ್‌ಗಳೆಂಬ ಕಪ್ಪು ಚುಕ್ಕೆಗಳು



ಚಿತ್ರ ಹಾಗೂ ಬರಹ: ವೀರೇಶ್ ಹೊಗೆಸೊಪ್ಪಿನವರ್

'ನಮ್ಮ ಊರು ಬೆಂಗಳೂರು, ಹೊಯ್.... ಆನಂದದ ತವರೂರು. . . .' ಆದರೆ ಎಲ್ಲಿದೆ ಬೆಂಗಳೂರಿನಲ್ಲಿ ಆನಂದ? ಟ್ರಾಫಿಕ್ಕು, ಕಳ್ಳತನ, ಸುಲಿಗೆ, ದರೋಡೆ! ಎಲ್ಲಿ ನೋಡಿದರೂ ಕಾಂಕ್ರೀಟ್ ಕಾಡು... ಅಷ್ಟೇ ಅಲ್ಲದೇ ಹಗಲು ದರೋಡೆಗಳು ಬೇರೆ.

ಆ ಹಾಡಿನಲ್ಲಿ ವರ್ಣಿಸಿರೊ ಹಾಗೆ ಗಿಡಗಳು, ಮರಗಳು ಯಥೇಚ್ಛವಾಗಿದ್ವು. ಆದರೆ ವಾಹನ ದಟ್ಟಣೆ ಹೆಚ್ಚಾಗುತ್ತಾ ಹೋದಂತೆ ರಸ್ತೆಗಳನ್ನೆಲ್ಲ ಅಗಲ ಮಾಡುತ್ತಾ ಹೋದ್ರು. ಆಗ ವಿಧಿಯೇ ಇಲ್ಲದೇ ಮರಗಳನ್ನು ಕಡೀತಾ ಹೋಗ್ಬೇಕಾಯ್ತು. ಹೀಗೇ ದಿನೇ ದಿನೇ ಮರಗಳನ್ನು ಕಡೀತಾ ಹೋದ್ರು. ನಗರದ ಅಂದನು ಕೆಡ್ತು ಪರಿಸರನೂ ಹಾಳಾಗಿ ಹೋಯ್ತು. ಈ ರೀತಿ ಮರಗಳು ಕಡಿಮೆ ಆಗಿ ಪರಿಸರ ಹಾಳಾಗ್ತಾ ಇದ್ರೆ. ಇನ್ನೊಂದು ಕಡೆ ಈಗಿನ ಹೊಸ ಟ್ರೆಂಡ್ ಆಗಿರೋ ವಿನೈಲ್ ಬ್ಯಾನರ್‌ಗಳು ಬೆಂಗಳೂರನ್ನ ಆಕ್ರಮಿಸಿಕೊಳ್ತಾ ಇವೆ. ಇವು ಕೂಡಾ ಪರಿಸರ ನಾಶ ಮಾಡೊದ್ರಲ್ಲಿ ತಮ್ಮದೊಂದು ಕೊಡುಗೆಯನ್ನೇ ನೀಡುತ್ತಾ ಬಂದಿವೆ.


ನಮ್ಮ ಹೆಚ್ಚಿನ ರಾಜಕಾರಣಿಗಳು ವಿನೈಲ್ ಬ್ಯಾನರ್‌ಗಳನ್ನು ಯುಗಾದಿ, ಸಂಕ್ರಾಂತಿ, ಹೊಸ ವರ್ಷ, ಬಕ್ರಿದ್ ಹೀಗೆ ಎಲ್ಲಾ ಹಬ್ಬಗಳ ಪ್ರಯುಕ್ತ ತಮ್ಮ ಕ್ಷೇತ್ರದ ಜನತೆಗೆ ಶುಭಾಶಯಗಳನ್ನು ತಿಳಿಸಲು ಬಳಸ್ತಾ ಇದಾರೆ.



ಇದು ಒಂಥರಾ ಆದ್ರೆ ಇದೇ ರಾಜಕಾರಣಿಗಳ ಹೆಸರನ್ನೇ ಬಳಸಿಕೊಂಡು ಪ್ರಚಾರ ಬಯಸುವ ಈ ರಿಯಲ್ ಎಸ್ಟೇಟ್ ಏಜಂಟರುಗಳು, ಕೆಲವೊಂದು ವಿಚಾರಗಳಲ್ಲಿ ರೌಡಿಗಳಾಗಿ ಮಿಂಚಿ ಮುಂದೆ ನಮಗೊಂದು ಸೀಟ್ ಕೊಡಿ ಅಂತ ಮಂತ್ರಿಗಳನ್ನು ಕೇಳೋಕೋಸ್ಕರ ರಾಜಕಾರಣಿಗಳ ಹೆಸರುಗಳು ಮತ್ತು ಅವರ ಚಿತ್ರಗಳನ್ನು ಬಿಂಬಿಸುವ ಬ್ಯಾನರ್‌ಗಳನ್ನು ಚಿತ್ರಿಸಿ ಕೆಳಗಡೆ ತಮ್ಮದೊಂದು ಸಣ್ಣ ಚಿತ್ರ ಹಾಕ್ಕೊಂಡು ತಮ್ಮದೇ ಆದ ಏರಿಯಾಗಳಲ್ಲಿ ರಾರಾಜಿಸುವಂತೆ ಹೋರ್ಡಿಂಗ್‌ಗಳನ್ನು ಹಾಕಿಸ್ತಾರೆ.


ಮೊದಲಾದ್ರು ಬಟ್ಟೆಯ ಬ್ಯಾನರ್‌ಗಳು ಬರ್ತಿದ್ವು, ಅವುಗಳು ಸ್ವಲ್ಪ ದಿನ ಮಳೆಲಿ ನೆಂದು ಬಿಸಿಲಲ್ಲಿ ಒಣಗಿದರೆ ಹರಿದು ಹೋಗ್ತಾ ಇದ್ವು... ಹಾಗಾಗಿ ಪರಿಸರಕ್ಕೆ ಅಷ್ಟೊಂದು ಹಾನಿಕಾರಕವಾಗಿ ಅನ್ನಿಸ್ತಾ ಇರ್ಲಿಲ್ಲ. ಆದ್ರೆ ಈಗ ಬಂದಿರೋ ವಿನೈಲ್ ಬ್ಯಾನರ್‌ಗಳಂತೂ ಬೇಗ ಹರಿಯೋಲ್ಲ. ಹರಿದರೂ ಅವು ಕೊಳೆತು ಹೋಗೋಲ್ಲ. ಅದ್ರಿಂದಾನೆ ಪರಿಸರಕ್ಕೆ ಹೆಚ್ಚು ಹಾನಿಯಾಗ್ತಿದೆ.


ಇದಿಷ್ಟು ಬ್ಯಾನರ್‌ಗಳ ಕತೆ ಆದ್ರೆ. ಬಂಟಿಂಗ್ಸ್‌ಗಳದ್ದು ಅದೇ ಕತೆ. ಚುನಾವಣಾ ಪ್ರಚಾರಕ್ಕಾಗಿ ನಾನಾ ಪಕ್ಷಗಳನ್ನು ಬಿಂಬಿಸುವ ಬಂಟಿಂಗ್ಸ್‌ಗಳು ಕಂಬದಿಂದ ಕಂಬಕ್ಕೆ, ಕಟ್ಟಡಗಳಿಂದ ಕಟ್ಟಡಗಳಿಗೆ ವ್ಯಾಪಿಸಿ ನಗರವೇ ಪ್ಲಾಸ್ಟಿಕ್‌ಮಯವಾಗಿ ಬಿಟ್ಟಿದೆ.


ನೀವು ಯೋಚಿಸಬಹುದು ಇಷ್ಟೆಲ್ಲ ಆದ್ರು ನಗರ ಪಾಲಿಕೆಯವರು ಯಾವುದೇ ಕ್ರಮ ತೆಗೆದುಕೊಳ್ಳೊಲ್ವ ಅಂತ. ಈಗ ನಗರಪಾಲಿಕೆಯ ಯಾವುದೇ ಸ್ಥಳದಲ್ಲಿ ಬ್ಯಾನರ್‌ಗಳನ್ನು ಅಥವ ಬಂಟಿಂಗ್ಸ್‌ಗಳನ್ನು ಹಾಕ್ಬೇಕಾದ್ರೆ ಜಂಟಿ ಆಯುಕ್ತರಿಗೊಂದು ಅರ್ಜಿ ಬರೆದು ಸದರಿ ಅರ್ಜಿಯಲ್ಲಿ ಎಷ್ಟು ಬ್ಯಾನರ್, ಯಾವ ಯಾವ ಸ್ಥಳಗಳಲ್ಲಿ ಬ್ಯಾನರ್‌ಗಳನ್ನು ಹಾಕಬೇಕು? ಇಂತಹ ವಿವರಗಳನ್ನು ನೀಡಿ ಪರವಾನಗಿಯನ್ನು ಪಡೆದು ನಂತರ ಅವರು ಸೂಚಿಸಿದ ಸ್ಥಳಗಳಲ್ಲಿ ಮಾತ್ರ ಹಾಕತಕ್ಕದ್ದು. ಅಷ್ಟೇ ಅಲ್ಲದೇ ಬಟ್ಟೆಯ ಬ್ಯಾನರ್‌ಗೆ ಪ್ರತಿ ಮೀಟರ್‌ಗೆ 20 ರೂ.ಗಳಂತೆ ಹಾಗೂ ಪ್ಲಾಸ್ಟಿಕ್ ಬ್ಯಾನರ್‌ಗಳಿಗೆ 60 ರೂಪಾಯಿಯಂತೆ ಹಣ ಸಂದಾಯ ಮಾಡಿ, ಪ್ರತಿ ಬ್ಯಾನರ್‌ಗಳ ಮೇಲೂ ನಗರಪಾಲಿಕೆಯ ಮುದ್ರೆ ಒತ್ತಿಸಿ ನಂತರ ಪಾಲಿಕೆಯವರು ಸೂಚಿಸಿದ ಸ್ಥಳದಲ್ಲಿ ಬ್ಯಾನರ್‌ಗಳನ್ನು ಕಟ್ಟಬೇಕಾಗುತ್ತದೆ. ಆದ್ರೆ ಎಷ್ಟು ಜನ ಈ ನಿಯಮಗಳನ್ನು ಪಾಲಿಸ್ತಾ ಇದಾರೋ ತಿಳಿಯುತ್ತಿಲ್ಲ. ಅಕ್ರಮವಾಗಿ ಕಟ್ಟಿದ ಬ್ಯಾನರ್‌ಗಳನ್ನು ನಗರ ಪಾಲಿಕೆಯವರು ಕಿತ್ತಾಕುತ್ತಾರೆ.


ಪ್ರಭಾವಶಾಲಿ ಜನರು ಹಾಗು ರಾಜಕಾರಣಿಗಳೇನೋ ಪಾಲಿಕೆಗೆ ಮೋಸ ಮಾಡಿ ಬ್ಯಾನರ್‌ಗಳನ್ನು ಹಾಕ್ತಾರೆ. ಆದ್ರೆ. ಸಣ್ಣ ಪುಟ್ಟ ಸಂಘಸಂಸ್ಥೆಗಳು ಬ್ಯಾನರ್‌ಗಳನ್ನು ಹಾಕಲಾಗದೇ ಗೋಡೆ ಬರಹಗಳ ಮೇಲೆಯೇ ಪ್ರಚಾರ ಮಾಡುತ್ತವೆ. ಕೆಲ ಬರಹಗಳಂತೂ ಎಷ್ಟು ಅರ್ಥ ಪೂರ್ಣವಾಗಿರುತ್ತವೆಂದರೆ ಅಲ್ಲಿ ಬರೆದಿರುವ ಸಾಲುಗಳು ಸಮಾಜದ ಕಣ್ಣು ತೆರೆಸುತ್ತವೆ. ಸ್ಯಾಂಪಲ್ ಓದಿ: 'ಬಾಬಾ ದತ್ತ ಬೇರೆ ಬೇರೆಯಲ್ಲ, ಹಿಂದೂ ಮುಸ್ಲಿಂ ಶತ್ರುಗಳಲ್ಲ,' 'ವಿಶ್ವದ ಕಾರ್ಮಿಕರೇ ಒಂದಾಗಿ.' ಈ ವಿನೈಲ್ ಬ್ಯಾನರ್‌ಗಳಿಂದ ಯಾರಿಗೆ ಉಪಯೊಗ ಆಗುತ್ತೋ ಇಲ್ಲವೋ, ಆದ್ರೆ ಸ್ಲಮ್‌ನಲ್ಲಿ ವಾಸಿಸುವ ಜನರಿಗಂತೂ ಇವೇ ಆಶ್ರಯವಾಗಿವೆ. ಎಷ್ಟೋ ಗುಡಿಸಲುಗಳಿಗೆ ಮೇಲ್ಛಾವಣಿಗಳಾಗಿವೆ.


ಪರಿಸರಹಾನಿ ತಡೆಗಟ್ಟಲು ನಿಮ್ಮಿಂದ ಅಳಿಲು ಸೇವೆಯನ್ನು ಸಲ್ಲಿಸಬಹುದು. ಅದು ಹೇಗೆ ಅಂತೀರಾ? ಅಕ್ರಮವಾಗಿ (ನಗರಪಾಲಿಕೆ ಮುದ್ರೆ ಇರದ) ಕಟ್ಟಿದ ಬ್ಯಾನರ್‌ಗಳು ಕಂಡು ಬಂದಲ್ಲಿ ಈ ಕೆಳಗಿನ ವಿಳಾಸಕ್ಕೆ ದೂರನ್ನು ನೀಡಬಹುದು.


ಬ್ಯಾನರ್ ಕಟ್ಟಲು ಅನುಮತಿ ಪಡೆಯಲು ಹಾಗೂ ದೂರನ್ನು ನೀಡಬೇಕಾದ ವಿಳಾಸ:
ಜಂಟಿ ಆಯುಕ್ತರು ದಕ್ಷಿಣ
ಬೆಂಗಳೂರು ಮಹಾನಗರ ಪಾಲಿಕೆ
9ನೇ ಅಡ್ಡರಸ್ತೆ,
ಜಯನಗರ 2 ನೇ ಹಂತ,
ಬೆಂಗಳೂರು-11. ದೂರವಾಣಿ: 22975700

0 comments:

ಹಾಡು ಕೇಳಿ

ಟ್ರಾಫಿಕ್ ಮಾಹಿತಿ

  © Free Blogger Templates Spain by Ourblogtemplates.com 2008

Back to TOP