Saturday, March 1, 2008

ನರಕ ದರ್ಶನ -೩: ಕಸಾಸುರ

ಜೂಜು , ಶೌಚ ಸಮಸ್ಯೆ ಯಾಯಿತು ಈಗ ಸೈಲೆಂಟಾದ ಹೆಮ್ಮಾರಿ....ಕಸಾಸುರ ನಿಮ್ಮ ಮುಂದೆ....ಬೆಂಗಳೂರಿನ ಎಲ್ಲೆಡೆ ಇರುವ ಪ್ರಮುಖ ಸಮಸ್ಯೆ ಕಸ ವಿಲೇವಾರಿ. ಕಸ ಹಾಕಲು ಜಾಗ ಹುಡುಕ ಬೇಕಾಗಿಲ್ಲ ಪಕ್ಕದಮನೆ ಖಾಲಿ ಸೈಟ್ ಸದಾ ಸಿದ್ಧ ಇರುತ್ತೆ, ಇಲ್ಲಾಂದ್ರೆ ಹತ್ತಿರದ ಚರಂಡಿಯಂತೂ ಸಿಗುತ್ತದೆ. ನಗರ ಪ್ರದೇಶದಲ್ಲಿ ಈಗಂತೂ ಖಾಲಿ ಸೈಟ್ ಸಿಗೋದು ಕಷ್ಟ. ಮತ್ತೆ ಎಲ್ಲಿ ಹಾಕೋದು ಜಾಗನೇ ಇಲ್ಲಾ ಅಂತಿರಾ. ನಮ್ಮ ನಾಗರೀಕರಿಗೆ ಕಸ ಹಾಕೋಕೆ ಕಷ್ಟ ಆಗದೇ ಇರಲಿ ಅನ್ನೋ ದೂರಾಲೋಚನೆಯಿಂದ ಸರ್ಕಾರ ತಳ್ಳು ಗಾಡಿಗಳನ್ನು ನಿರ್ಮಿಸಿ ಕೆಲಸಕ್ಕೆ ಜನರನ್ನು ನೇಮಿಸಿತು. ದಿನ ಬೆಳಗ್ಗೆ ತಪ್ಪದೇ ಹಾಜರಾಗುವ ಇವರು (ತಿಂಗಳ ಮೊದಲ ವಾರವಂತೂ ಖಂಡಿತಾ. ಬೆಳಗ್ಗೆ ನೀವು ಕಾಫೀ ಹೀರುವುದರೊಳಗೆ ಹಾಜರ್) ಕಸವನ್ನು ಸಂಗ್ರಹಿಸಿ ಸಾಗಿಸುವ ರೀತಿ ವರ್ಣನಾತೀತ.

ಇವರಿಗೆ ಪಾಲಿಕೆಯ ಸಂಬಳದ ಜೊತೆಗೆ ಇವರು ಗಾಡಿ ಸಾಗುವ ಹಾದಿಯ ಮನೆಯವರಿಂದಲೂ ಹಣ ವಸೂಲಿ ಮಾಡುತ್ತಾರೆ. ಇವರು ಗುತ್ತಿಗೆ ಆಧಾರಿತ ಕೆಲಸಗಾರರೇ ಇರಬಹುದು. ಕೆಲವರು ಪರ್ಮನೆಂಟ್ ನೌಕರರೇ ಇರಬಹುದು. ಸಂಬಳದ ಜೊತೆಗೆ ಗಿಂಬಳ ಯಾಕೆ. ಇವರಿಂದ ಸಂಗ್ರಹವಾದ ಕಸವನ್ನು ಮಾನ್ಯ ಬಿಸಿಸಿ ಲಾರಿಗಳು ಒತ್ತೊಯ್ದು ಎಲ್ಲಿಗೆ ಮುಟ್ಟಿಸುತ್ತವೆ ಅನ್ನೊದೆ ಪ್ರಶ್ನೆ? ದಾರಿಯುದ್ದಕ್ಕೂ ಕಸದ ರಸವನ್ನು, ಅದರ ಪರಿಮಳವನ್ನು ಎಲ್ಲೆಡೆ ಹರಡುತ್ತಾ, ಸಂಚರಿಸುವ ಲಾರಿಗಳು ಎಲ್ಲರನ್ನೂ ಮೂಗು ಹಿಡಿಯುವಂತೆ ಮಾಡುವುದಂತೂ ನಿಜ.

ಈ ಕಸವನ್ನೆಲ್ಲಾ ಬೇರ್ಪಡಿಸುವ ಕಾರ್ಯ ನಿಜಕ್ಕೂ ಸಾಹಸವೇ ಸರಿ. ಆದರೆ ಬೇರ್ಪಡಿಸುವ ಕಾರ್ಯ ಸರಿಯಾಗಿ ನಡೆಯುತ್ತಿದೆಯೇ? ಇಲ್ಲವೇ. ಕಸ ಬೇರ್ಪಡಿಸುವವರಿಗೆ ಕಸ ವಿಗಂಡಿಸುವ ಕನಿಷ್ಠ ಜ್ಞಾನ ಇದೆಯೇ ಇಲ್ಲವೇ ಪ್ರಶ್ನಾತೀತವಾಗಿ ಸಾಗಿದೆ ಕಸಾಸುರನ ಹಾವಳಿ. ನಾಗರೀಕರಿಂದ ಪ್ಲಾಸ್ಟಿಕ್ ಚೀಲಕ್ಕೆ ಸೇರುವ ಕಸ , ತಳ್ಳು ಗಾಡಿಯಲ್ಲಿ ಸಾಗಿ, ಲಾರಿಯಲ್ಲಿ ಸವಾರಿ ಮಾಡಿ ದೊಡ್ಡ ಕಸದ ರಾಶಿಯನ್ನು ಸೇರಿದ ಮೇಲೂ ಕಸದಿಂದ ಪ್ಲಾಸ್ಟಿಕ್ ಬೇರ್ಪಡುವುದು ತುಂಬಾ ವಿರಳ. ಹೋಗಲಿ ಈ ಕಸದ ರಾಶಿಗೆ ಬೇಲಿಯನ್ನು ಹಾಕುವುದಿಲ್ಲ. ಹಾದಿ -ಬೀದಿಯಲ್ಲಿಯ ಹಸು, ನಾಯಿ ಮುಂತಾದ ಪ್ರಾಣಿಗಳಿಗೆ ಆಹಾರದ ಜೊತೆ ಪ್ಲಾಸ್ಟಿಕ್ ಎಂಬ ವಿಷವನ್ನು ಉಣಿಸುವಲ್ಲಿ ಯಾರ್‍ಯಾರ ತಪ್ಪು ಅಡಗಿದೆಯೋ ನೀವೇ ನಿರ್ಧರಿಸಿ.

ಈಗಾಗಲೇ ಆಹಾರದ ಜೊತೆ ಪ್ಲಾಸ್ಟಿಕ್ ಸೇವಿಸಿ ಅರಗಿಸಿಕೊಳ್ಳಲಾಗದೇ ಮೃತಪಟ್ಟ ಪ್ರಾಣಿಗಳ ವ್ಯಥೆಯನ್ನು ಓದಿರಬಹುದು. 'ಪರಿಸರ ಸಂರಕ್ಷಿಸಿ ಪ್ಲಾಸ್ಟಿಕ್ ನಿಷೇಧಿಸಿ' ಎಂಬುದು ಘೋಷೆಣೆಗೆ ಮಾತ್ರ ಸೀಮಿತವಾಗಿರುವುದು ವಿಷಾದನೀಯ. ಬೆಂಗಳೂರು ಬೆಳೆಯುತ್ತಿದ್ದಂತೆ ಕಸದ ಸಮಸ್ಯೆ
ಹೆಚ್ಚಾಗುತ್ತಿದೆ. ಐಟಿ ಕಂಪೆನಿಗಳಿಂದ ಹೊರ ಹಾಕಲ್ಪಡುವ ದುಬಾರಿ ಇ-ಕಸದ ಬಗ್ಗೆ ಹೇಳ ಹೊರಟರೆ ಈ ಅಂಕಣದ ಮಿತಿ ಮೀರುತ್ತೆ ಬಿಡಿ. ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಪ್ರತಿವರ್ಷ೪೦ ಮಿಲಿಯನ್ ಟನ್ ಕಸ ಉತ್ಪಾದನೆ ಆಗುತ್ತದೆ. ಬೆಂಗಳೂರಿನಲ್ಲಿ ೨,೧೩೦ ಟನ್ ಕಸ ಪ್ರತಿ ದಿನ ಹೊರ ಬೀಳುತ್ತಿದೆ.

ತ್ಯಾಜ್ಯ ವಸ್ತುಗಳಿಂದ ವಿದ್ಯುತ್ ಉತ್ಪಾದಿಸುವ ಘಟಕ ದಿನವೊಂದಕ್ಕೆ ೧,೦೦೦ ಟನ್ ಬಳಸಿ ೮ ಮೆಗಾ. ವ್ಯಾಟ್ ವಿದ್ಯುತ್ ತಯಾರಿಸುವ ಸಾಮರ್ಥ್ಯ ಹೊಂದಿರುತ್ತದೆ. ಈ ರೀತಿಯ ಘಟಕ ಬೆಂಗಳೂರಿನ ಹೊಸಕೋಟೆ ಸಮೀಪವಿದೆ. ಆದರೆ ಇದರ ಉಪಯೋಗ ಸರಿಯಾಗಿ ಆಗುತ್ತಿಲ್ಲ ಎಂಬುದು ಪರಿಸರವಾದಿಗಳ ದೂರು.

ಕಸ ಹಾಕದೇ ಇರೋಕೆ ಸಾಧ್ಯವಿಲ್ಲ ಬಿಡಿ. ಆದರೆ ಕಸದ ಪ್ರಮಾಣ ಹಾಗೂ ವಿಂಗಡಣೆಯನ್ನು ಪ್ರತಿ ಮನೆಯವರೂ ಮಾಡಿದರೆ ಕಸ ವಿಲೇವಾರಿ ಮಾಡುವವರಿಗೆ ಅನುಕೂಲವಾಗುತ್ತದೆ. ತನ್ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗುತ್ತದೆ. ಪುನರ್ ಬಳಕೆ ಮಾಡಲಾಗದಂತಹ ವಿಷಯುಕ್ತ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ವಿಷಯುಕ್ತ ಕಸವನ್ನು ತಿಂದು ಪ್ರಾಣಕಳೆದುಕೊಳ್ಳುವ ಮೂಕಪ್ರಾಣಿಗಳನ್ನು ರಕ್ಷಿಸುವ ಹೊಣೆ ಬೆಂಗಳೂರು ನಾಗರೀಕರಿಗೆ ಇದೆ ಅನಿಸುತ್ತದೆ. ಈ ಸಂದರ್ಭದಲ್ಲಿ ಹಂಸಲೇಖರ ಹಾಡಿನ ಒಂದು ಸಾಲು ನೆನಪಿಗೆ ಬರುತ್ತದೆ... 'ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ ನಾವೇ ಮೂಢರಾದರೆ ಜ್ಞಾನಕ್ಕೆಲ್ಲಿ ಪೂಜ್ಯತೆ.. ನಾಗರೀಕರಾದ ಮೇಲೆ ಸುಗುಣರಾಗಬೇಕು' ಇನ್ನೊಮ್ಮೆ ಕಸ ಹೊರಹಾಕುವ ಮುನ್ನ ಯೋಚಿಸಿ.

ಲೇಖನ:ಮಲೆನಾಡಿಗ
ಚಿತ್ರಗಳು: ವೀರೇಶ್ ಹೊಗೆಸೊಪ್ಪಿನವರ

1 comments:

Srikanth - ಶ್ರೀಕಾಂತ March 1, 2008 at 12:49 AM  

ಅಂದವಾದ ಲೇಖನ, ಸತ್ಯವಾದ ಮಾತುಗಳು...

ಈಗಲೇ ಬೇಕಾದಷ್ಟು ಅನಾಹುತಗಳಾಗಿವೆ. ಆದರೂ ಬುದ್ಧಿ ಕಲಿಯಲು ಕಾಲ ಮಿಂಚಿಲ್ಲ. ಈಗಲಾದರೂ ಬುದ್ಧಿ ಕಲಿಯುತ್ತೇವೇ?

ವಿಡಿಯೋ ಸಾಲು

Loading...

ಹಾಡು ಕೇಳಿ

ಟ್ರಾಫಿಕ್ ಮಾಹಿತಿ

  © Free Blogger Templates Spain by Ourblogtemplates.com 2008

Back to TOP